SUDDIKSHANA KANNADA NEWS/ DAVANAGERE/ DATE:30-07-2024
ದಾವಣಗೆರೆ: ನೀರಿನಲೆಗಳ ಸೌಂದರ್ಯ ಸಮರ… ಭದ್ರಾ ಡ್ಯಾಂ ಹೊರ ಹರಿವಿನ ಸೊಬಗಿನ ಚಿತ್ತಾರ.. ನೋಡಲು ಹರಿದು ಬರುತ್ತಿದೆ ಜನಸಾಗರ… ಸೌಂದರ್ಯದ ಸೊಬಗಿನ ವೈಯ್ಯಾರ… ನೋಡಿದರೆ ಮತ್ತೆ ನೋಡಬೇಕೆಂಬ ಮೈಜುಮ್ಮೆನಿಸುವ ಸುಂದರ…
ಇದು ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ ಸೃಷ್ಟಿಯಾಗಿರುವ ಚೆಲುವಿನ ಚಿತ್ತಾರ. ಹೌದು. ಭದ್ರಾ ಜಲಾಶಯದಿಂದ ಸಾವಿರಗಟ್ಟಲೇ ನೀರು ಹೊರ ಬಿಡುತ್ತಿರುವುದರಿಂದ ಭದ್ರಾ ಡ್ಯಾಂ ಮುಂಭಾಗ ಹೊಸ ಲೋಕವೇ ಸೃಷ್ಟಿಯಾಗಿದೆ.
ಭದ್ರಾ ಜಲಾಶಯದಿಂದ ನೀರು ಹೊರಬಿಡುತ್ತಿದ್ದಂತೆ ಜನರ ಝೇಂಕಾರ ಮುಗಿಲು ಮುಟ್ಟಿತು. ನೋಡಲು ಹಳ್ಳಿ ಹಳ್ಳಿಗಳಿಂದ ಜನರು ಬಂದಿದ್ದರು. ಜಲಾಶಯದ ನಾಲ್ಕು ಗೇಟ್ ತೆರೆಯುತ್ತಿದ್ದಂತೆ ಹಾಲ್ನೊರೆಯಂತೆ ಧುಮ್ಮುಕ್ಕಿದ ನೀರಿನ ವೈಭವ ನೋಡಲು ಎರಡು ಕಣ್ಣು ಸಾಲದು.
ಭದ್ರಾ ಡ್ಯಾಂ ಹಿನ್ನೀರು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾನಯನ ಪ್ರದೇಶದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಜಲಾಶಯದ ಸುತ್ತಮುತ್ತ ಮಳೆಗಾಲದ ಸೊಬಗು ಅನಾವರಣಗೊಂಡಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರ, ಲಕ್ಷಾಂತರ ಹೆಕ್ಟೇರ್ ಪ್ರದೇಶಗಳ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ನೀರು ಹೊರ ಬರುತ್ತಿರುವುದನ್ನು ನೋಡಲು ಜನರು ಹಳ್ಳಿ ಹಳ್ಳಿಗಳಿಂದ ಮಳೆಯನ್ನೂ ಲೆಕ್ಕಿಸದೇ ಆಗಮಿಸುತ್ತಿದ್ದಾರೆ. ಜಲಾಶಯಕ್ಕೆ ಎಷ್ಟು ಒಳಹರಿವು ಬರುತ್ತದೆಯೋ ಅಷ್ಟು ಹೊರ ಹರಿವು ಇರುತ್ತದೆ. ದಿನ ಕಳೆದಂತೆ ಇದರ ವೈಯ್ಯಾರದ ಸೊಬಗು ಮತ್ತಷ್ಟು ಹೆಚ್ಚಾಗಲಿದೆ.
ಭದ್ರಾ ಜಲಾಶಯ ನಿರ್ಮಾಣ ಆದಾಗಿನಿಂದಲೂ ಜುಲೈ ತಿಂಗಳಲ್ಲಿ ಭರ್ತಿಯಾಗಿದ್ದು ತುಂಬಾನೇ ಕಡಿಮೆ. ಆದ್ರೆ, ಈ ವರ್ಷ ವರುಣನ ಆರ್ಭಟ ಹೆಚ್ಚಾದ ಕಾರಣ ಭದ್ರಾ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಭದ್ರಾ ಡ್ಯಾಂ ನಾಲ್ಕು ಗೇಟ್ ಗಳನ್ನು ತೆರೆಯಲಾಗಿದ್ದು, ಒಂದು ಗೇಟ್ ನಿಂದ ಎರಡನೇ ಗೇಟ್, ಮೂರನೇ ಗೇಟ್ ಹಾಗೂ ನಾಲ್ಕನೇ ಗೇಟ್ ನಲ್ಲಿ ನೀರು ಹರಿಯುತ್ತಿದ್ದಂತೆ ಸೌಂದರ್ಯದ ಖನಿ ಹೆಚ್ಚಾಯಿತು. ನೋಡುತ್ತಿದ್ದವರ ಮನದಲ್ಲಿ ಪುಳಕವಾಯಿತು.
2024-25ನೇ ಸಾಲಿನ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಮುಂಗಾರು ಬೆಳೆಗಳಿಗೆ ಸತತವಾಗಿ ಭದ್ರಾ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಗಳಿಗೆ ಜಲಾಶಯದಿಂದ ವೇಳಾಪಟ್ಟಿಯ ಅನುಗುಣವಾಗಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು.
ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು, ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಭದ್ರಾ ಎಡದಂಡೆ, ಭದ್ರಾ ಬಲದಂಡೆ ಕಾಲುವೆ ನಾಲೆಗಳಲ್ಲಿ ನೀರನ್ನು ಇಂದಿನಿಂದ ತಲಾ 120 ದಿನಗಳ ಕಾಲ ಹರಿಸಲಾಗುವುದು. ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಆಂತರಿಕ ಸರದಿಯನ್ನು ಕಾರ್ಯಪಾಲಕ ಇಂಜಿನಿಯರ್ ನಿರ್ಧರಿಸುತ್ತಾರೆ. ನೀರಾವರಿಯಾಗಲಿರುವ ಸವಿಸ್ತಾರ ಸರ್ವೆ ನಂಬರುಗಳು ಹಾಗೂ ಬೆಳೆಯಬೇಕಾದ ಬೆಳೆಗಳ ವಿವರಗಳನ್ನು ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್‌ರವರು ಪ್ರಕಟಿಸುತ್ತಾರೆ.