SUDDIKSHANA KANNADA NEWS/ DAVANAGERE/ DATE:02-02-2025
ದಾವಣಗೆರೆ: ಅಂತಾರಾಷ್ಟ್ರೀಯ, ನವೋದಯ ಶಾಲೆಗಳಲ್ಲಿ ಸಿಗುವಂಥ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗುವಂತಾಗಬೇಕು ಎಂಬ ದೊಡ್ಡ ಕನಸು ಹೊಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಗಳು ಮೇಲ್ದರ್ಜೆಗೇರಬೇಕು. ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ಕೃಷ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಉನ್ನತ ಸ್ಥಾನಕ್ಕೆ ಹೋಗಬೇಕೆಂಬುದು ಪ್ರತಿಷ್ಠೆಯ ವಿಚಾರ ಅಲ್ಲ. ದೊಡ್ಡಮಟ್ಟದಲ್ಲಿ ಜನರಿಗೆ ಸೇವೆ ಮಾಡಲು. ಕರ್ನಾಟಕದಲ್ಲಿ ಇನ್ ಸೈಟ್ಸ್ ಸಂಸ್ಥೆಯ ಆರು ವಿದ್ಯಾರ್ಥಿಗಳು ಡಿಸಿ, ಸಿಇಒ ಆಗಿದ್ದಾರೆ. ಎಸ್ಪಿ, ಎಎಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ಐಎಎಸ್, ಐಪಿಎಸ್ ತಯಾರಿಸುವ ಶಕ್ತಿ ಇದೆ. ಜೀವನ ಸಾರ್ಥಕಗೊಳಿಸಬೇಕಾದರೆ ಉನ್ನತ ಸ್ಥಾನಕ್ಕೆ ಹೋಗಬೇಕು. ಇದಕ್ಕೆ ಸತತ ಪರಿಶ್ರಮ, ಅಧ್ಯಯನ, ಪುಸ್ತಕ ಓದುವ ಹವ್ಯಾಸ, ಸಂಸ್ಕಾರ ಬೇಕು ಎಂದು ಕಿವಿಮಾತು ಹೇಳಿದರು.
ಪೋಷಕರು ಯಾವುದೇ ಕಾರಣಕ್ಕೂ ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಮಕ್ಕಳ ಹೇಳಬೇಡಿ. ಬಡತನವಿದೆ, ಹಣವಿಲ್ಲ ಎನ್ನಬೇಡಿ. ಸಾಧ್ಯವಾದಷ್ಟು ಒಳ್ಳೆಯ ಶಿಕ್ಷಣ ನೀಡುವ ಕಡೆಗೆ ಗಮನ ಕೊಡಿ. ಪಠ್ಯ ಶಿಕ್ಷಣ ಮಾತ್ರವಲ್ಲ, ಪಠ್ಯೇತರ ಶಿಕ್ಷಣದತ್ತಲೂ ಕಾಳಜಿ ವಹಿಸಿ. ಪುಸ್ತಕ ಓದುವ ಹವ್ಯಾಸ ನೀವೂ ಬೆಳೆಸಿಕೊಳ್ಳಿ. ಮಕ್ಕಳಲ್ಲಿಯೂ ರೂಢಿಸಿ. ಆಗ ಭಾರೀ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ನಾನು ಹತ್ತನೇ ತರಗತಿಯವರೆಗೆ ಸಾಮಾನ್ಯ ವಿದ್ಯಾರ್ಥಿ. ಐಎಎಸ್ ಎರಡು ಅಂಕಗಳಲ್ಲಿ ತಪ್ಪಿ ಹೋಯಿತು. ಪಿಡಿಒ ಆಗಿದ್ದೆ, ಕೆಎಎಸ್ ಪಾಸಾಗಿದ್ದೆ. ಸೋತಾಗ ಸುಮ್ಮನೆ ಕೂರುತ್ತಿರಲಿಲ್ಲ. ದೊಡ್ಡ ಪ್ರಯತ್ನ ಮಾಡುತ್ತಿದೆ. ಸೋತಾಗ ಕೆಲವರು ಸುಮ್ಮನಾಗಿಬಿಡುತ್ತಾರೆ. ಆದ್ರೆ, ಸುಮ್ಮನಾಗದೇ ದೊಡ್ಡ ಕನಸು ಕಾಣಬೇಕು. ಆಗ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಮಕ್ಕಳಿಗೆ ಬೈಯ್ಯಬೇಡಿ. ಜೀವನದಲ್ಲಿ ಸವಾಲು ಎದುರಿಸುವ ಗುಣ ಬೆಳೆಸಿ. ಭವಿಷ್ಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಅವರಲ್ಲಿ ಬರುತ್ತದೆ. ಪ್ರತಿಯೊಬ್ಬರೂ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆಗುವುದು ಕಡಿಮೆ. ಸೋತಾಗ ಧೈರ್ಯ ತುಂಬಿ. ಮರಳಿ ಪ್ರಯತ್ನವ ಮಾಡು ಎಂಬ ಧೈರ್ಯ ಹೇಳಿ. ಡಾಕ್ಟರ್, ಎಂಜಿನಿಯರ್ ಆಗಿ ಎಂಬ ಒತ್ತಡ ಹೇರಬೇಡಿ. ಒಳ್ಳೆಯ ವ್ಯಕ್ತಿಯಾಗು, ಒಳ್ಳೆಯ ಮಾನವನಾಗು ಎಂಬ ಸಂದೇಶ ಹೇಳಿಕೊಡಿ. ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಮೂಡಿಸಿದರೆ ಭವಿಷ್ಯದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರು ಹಲವು ಸಮಸ್ಯೆಗಳಿದ್ದು, ಮನವಿ ನೀಡಿದ್ದಾರೆ. ಶಾಲೆಗೆ ಸುಣ್ಣಬಣ್ಣ ಬಳಿಸುವುದು, ಸ್ಮಾರ್ಟ್ ಕ್ಲಾಸ್, ಧ್ವನಿವರ್ಧಕ ಬದಲಾವಣೆ, ಆಟದ ಮೈದಾನ ಸೇರಿದಂತೆ ಇತರೆ ಬೇಡಿಕೆ ನೀಡಿದ್ದಾರೆ. ನಾನು ಎರಡು ಪ್ರಮುಖ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಆದಷ್ಟು ಬೇಗ ಈಡೇರಿಸುತ್ತೇನೆ. ಮಕ್ಕಳಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ. ಮಕ್ಕಳು ದೊಡ್ಡ ಕನಸು ಕಾಣುವುದನ್ನು ರೂಢಿಸಿಕೊಳ್ಳಬೇಕು. ಕಕ್ಕರಗೊಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಮಕ್ಕಳೂ ಚಿಕ್ಕ ವಯಸ್ಸಿನಿಂದಲೇ ಐಎಎಸ್, ಐಪಿಎಸ್, ದೊಡ್ಡ ಉದ್ಯಮಿಗಳಾಗುತ್ತೇವೆ ಎಂಬ ಕನಸು ಕಂಡರೆ ಮುಂದೊಂದು ದಿನ ನನಸಾಗುವ ಸಮಯ ಬರುತ್ತದೆ. ಇಂದಿನಿಂದಲೇ ದೃಢ ನಿಶ್ಚಯ ಮಾಡಿಕೊಳ್ಳಿ. ಸತತವಾಗಿ ಪ್ರಯತ್ನ ಮಾಡಿ. ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡು ಹೆಚ್ಚಾಗಿ ಪುಸ್ತಕ ಅಧ್ಯಯನ ಮಾಡಿದರೆ ಕಷ್ಟವಾಗದು ಎಂದು ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಸೋತಿದ್ದೇನೆ, ಧೃತಿಗೆಟ್ಟಿಲ್ಲ
ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಹಾಗೆಂದ ಮಾತ್ರಕ್ಕೆ ಧೃತಿಗೆಟ್ಟಿಲ್ಲ. ಮುಂದೊಂದು ದಿನ ಎಂಎಲ್ ಆ ಆಗಬಹುದು. ಸಚಿವರಾಗಬಹುದು. ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇದು ಸಾಧ್ಯವಾಗುತ್ತದೆ ಎಂಬ ಆತ್ಮವಿಶ್ವಾಸ ಇದೆ. ಶಿಕ್ಷಣ ಸಚಿವರಾಗಬೇಕೆಂಬ ಆಸೆ ಇದೆ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಆವರಗೊಳ್ಳದ ಪುರವರ್ಗ ಹಿರೇಮಠ ಶ್ರೀಕ್ಷೇತ್ರದ ಶ್ರೀ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಲೋಕೇಶ್ ಒಡೆಯರ್, ಕೆ. ಜಿ. ಶಾಂತರಾಜ್, ಪುಷ್ಪ ಕೆ. ಎನ್. ಸದಾಶಿವಪ್ಪ, ಆಶಾ ಸಿದ್ದೇಶ್, ಗುತ್ಯಪ್ಪ, ಆರ್. ಡಿ. ಕುಲಕರ್ಣಿ, ಹದಡಿ ಯಲ್ಲಪ್ಪ, ಹಂಪನೂರು ಪಾಲಾಕ್ಷಪ್ಪ, ಅಂಗಡಿ ಚಮನ್ ಸಾಬ್, ಮುಸ್ತು ಎಸ್. ಮತ್ತಿತರರು ಹಾಜರಿದ್ದರು.