SUDDIKSHANA KANNADA NEWS/ DAVANAGERE/ DATE:21-03-2025
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರತಿ ಇಲಾಖೆಯ ಸಂಬಳ ನೀಡುವುದಕ್ಕೂ ಪರದಾಡುತ್ತಿರುವ ನಿರಂತರ ಬಯಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ (B. Y. Vijayendra) ಹೇಳಿದ್ದಾರೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರ ಪಿಂಚಣಿ, ಗ್ರಾಚ್ಯುಟಿಗೆ ಹಣ ಹೊಂದಿಸಲು ಪ್ರತಿ ಯುನಿಟ್ ವಿದ್ಯುತ್ ದರವನ್ನು 36 ಪೈಸೆ ಹೆಚ್ಚಿಸಲಾಗಿದೆ. ಅಲ್ಲದೆ ಇದೇ ತಿಂಗಳ ಕೊನೆಯ ಭಾಗದಲ್ಲಿ ಮತ್ತೆ ದರ ಹೆಚ್ಚಿಸುವ ನಿರ್ಧಾರ “ಕದ್ದು ಮುಚ್ಚಿ ಭ್ರಷ್ಟಾಚಾರ ಮಾಡುವುದಷ್ಟೇ ಅಲ್ಲ, ಕದ್ದು ಮುಚ್ಚಿ ದರ ಏರಿಕೆಯ ಮೂಲಕವೂ ಜನರ ಸುಲಿಗೆ ಮಾಡಬೇಕು ಎಂಬ ನಿಲುವಿಗೆ ಬಂದಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿ. ವೈ. ವಿಜಯೇಂದ್ರ (B. Y. Vijayendra) ಆರೋಪಿಸಿದ್ದಾರೆ.
ಬೆಸ್ಕಾಂ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ 400-800 ರಷ್ಟು ದರ ಏರಿಕೆ ಮಾಡಿರುವ ನಿರ್ಧಾರ ಪ್ರಕಟಿಸಿರುವುದು ಕೇವಲ ವಿದ್ಯುತ್ ಶಾಕ್ ಅಲ್ಲ, ಜನ ಸುಲಿಗೆಯ ಲೂಟಿಕೋರತನವಾಗಿದೆ. ಇದೀಗ ಪ್ರತಿ ಯುನಿಟ್ ಗೆ 36 ಪೈಸೆ ಹೆಚ್ಚಳ ಹಾಗೂ ತಿಂಗಳಾಂತ್ಯಕ್ಕೆ ಮತ್ತೆ ಪರಿಷ್ಕರಣೆ ಮಾಡಿ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿಗೆ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗಿಸಲು ಹೊರಟಿರುವುದಲ್ಲದೇ ಸ್ವತಃ ಇಂಧನ ಸಚಿವರೇ ಇದು ದರ ಏರಿಕೆಯಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವುದು ಜನಪರ ಚಿಂತನೆ ಮರೆತು ಅಧಿಕಾರ ದರ್ಪದ ಪರಮಾವಧಿಯಲ್ಲದೇ ಬೇರೇನೂ ಅಲ್ಲ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ: ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್ ಪ್ರಯತ್ನ: ಸತೀಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ!
ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯಾಗಿರುವುದರ ಸ್ಪಷ್ಟ ಸೂಚನೆ ಇಂತಹ ಜನವಿರೋಧಿ ಆರ್ಥಿಕ ನಿರ್ಧಾರಗಳಿಂದ ವ್ಯಕ್ತವಾಗುತ್ತಿದೆ. ವಿದ್ಯುತ್ ದರ ಏರಿಕೆ ಹಾಗೂ ಸ್ಮಾರ್ಟ್ ಮೀಟರ್ ದರದ ಹೆಚ್ಚಳವನ್ನು ಈ ಹಿಂದಿನಂತೆ ನಿಗದಿಪಡಿಸದೇ ಹೋದರೆ ಜನರ ಆಕ್ರೋಶ ಎದುರಿಸಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಲಿ ಎಂದು ಎಚ್ಚರಿಕೆ ನೀಡಿದ್ದಾರೆ.