SUDDIKSHANA KANNADA NEWS/ DAVANAGERE/ DATE-03-06-2025
ದಾವಣಗೆರೆ: ದಾವಣಗೆರೆ ಜನ ಶಾಂತಿ ಪ್ರಿಯರಿದ್ದೀರಿ, ಈ ತನಕ ನಮಗೆ ಎಲ್ಲಾ ಸಹಕಾರ ನೀಡುತ್ತಾ ಬಂದಿದ್ದೀರಿ. ಆದರೆ ಕೆಲವು ಯುವಕರು, ಕಿಡಿಗೇಡಿಗಳು ಶಾಂತಿ ಕದಡುವ ಕೆಲಸ ಮಾಡಿದರೆ ಪಕ್ಷ-ಬೇದ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ಖಚಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಬಕ್ರೀದ್ ಹಬ್ಬದ ಪ್ರಯುಕ್ತ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧರ್ಮದ ಪ್ರತಿಪಾದಕರು ಒಳ್ಳೆಯದನ್ನು ಸಮಾಜಕ್ಕೆ ಮತ್ತು ಯುವಕರಿಗೆ ಹೇಳಬೇಕು. ಅದನ್ನು ಬಿಟ್ಟು ಯುವಕರಿಗೆ ಪ್ರಚೋದಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ತಮಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಸಮಾಜದಲ್ಲಿ ತಪ್ಪು ನಡೆಯುತ್ತಿದೆ ಎಂದು ಅನಿಸಿದರೆ ನಮಗೆ ಭೇಟಿ ಮಾಡಿ ಹೇಳಿದರೆ, ಮೇಲಾಧಿಕಾರಿಗಳ ಗಮನಕ್ಕೆ ತಂದರೆ
ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ನೈತಿಕ ಪೊಲೀಸ್‌ಗಿರಿ ಮಾಡಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸಾರ್ವಜನಿಕರ ನಮ್ಮ ಜೊತೆ ಕೈಜೋಡಿಸಬೇಕು. ಅಕ್ರಮ ಜಾನುವಾರು ಸಾಗಾಟ, ಅಕ್ರಮ ಚಟುವಟಿಕೆ ಇತ್ಯಾದಿ ಬಗ್ಗೆ ಮಾಹಿತಿ ಇದ್ದರೆ ನೇರ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಅದನ್ನು ಬಿಟ್ಟು ನೈಜ ಘಟನೆಯೇ ಬೇರೆ ಅದನ್ನು ಪ್ರತಿಬಿಂಬಿಸುವುದೇ ಬೇರೆ ಆಗಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬಂದಂತಹ ದ್ವೇಷ ಭಾವನೆ ಹರುಡುವಂತಹ ವಿಡಿಯೋ, ಪೋಟೋಗಳನ್ನು ಸರಿಯಾಗಿ ಪರಿಶೀಲಿಸದೇ ಸುಮ್ಮನೇ ಫಾರ್ವಡ್ ಮಾಡಿದರೆ, ಫಾರ್ವರ್ಡ್ ಮಾಡಿದವರ ಎಲ್ಲರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಕಮ್ಯೂನಲ್ ಗುಂಡಾ, ರೌಡಿ ಶೀಟರ್ ಗಳ ಮೇಲೆ ನಿಗಾವಹಿಸಲಾಗಿರುತ್ತದೆ ಎಂದು ತಿಳಿಸಿದರು.
ಸಣ್ಣ ಪುಟ್ಟ ಘಟನೆಗಳ ನೈಜತೆಯನ್ನು ಮರೆಮಾಚಿ ಪ್ರಕರಣವನ್ನು ತಿರುಚುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿರುವುದು ಕಂಡು ಬರುತ್ತಿದ್ದು, ಈ ಬಗ್ಗೆ ಸಮಾಜದ ಮುಖಂಡರು ಯುವಕರಿಗೆ ಮಾರ್ಗದರ್ಶನ ಮಾಡಿ. ಮುಖ್ಯಮಂತ್ರಿಗಳು ಹೇಳಿದಂತೆ ಶಾಂತಿ, ಸೌಹಾರ್ದತೆ ಇದ್ದರೆ ಅಭಿವೃದ್ದಿ ಸಾಧ್ಯ ಎನ್ನುವುದನ್ನು ಮನಗಾಣಿಸಬೇಕು. ಶಾಂತಿ ಕದಡುವವರ ಬಗ್ಗೆ ನಮ್ಮ ಗಮನಕ್ಕೆ ತರಬೇಕು ಮತ್ತು ನೈಜತೆಯ ಬಗ್ಗೆ ಮಾಹಿತಿ ನೀಡಬೇಕು. ಸುಳ್ಳು ಸುದ್ದಿಗಳನ್ನು ಹರಡಬಾರದು. ಬಕ್ರೀದ್ ಹಬ್ಬ ತ್ಯಾಗ , ಬಲಿದಾನದ ಪ್ರತೀಕ, ಹಂಚಿ ತಿನ್ನು, ಒಳ್ಳೆಯದನ್ನು ಎಲ್ಲರಿಗೂ ಹಂಚು ಅಂತ ಬಿಂಬಿಸುತ್ತದೆ. ಅದರಂತೆ ಕೆಟ್ಟದ್ದನ್ನು ತ್ಯಾಗ ಮಾಡಿ ಎಲ್ಲರೂ ಹಂಚಿ ತಿನ್ನಬೇಕು ಹಾಗೂ ಸಹ-ಬಾಳ್ವೆಯಿಂದ ಇರುವಂತೆ ಸೂಚಿಸಿದರು.
ನಮ್ಮ ಜಿಲ್ಲೆಯಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಕೆಲಸ ಮಾಡಲು ಇಚ್ಛೆ ಉಳ್ಳ ವರಿಗೆ ಮಿತ್ರ ಪಡೆ ಹಾಗೂ ಜಂಟಿ ಕೈಗಳು ಎಂಬ ಪಡೆ ರಚಿಸಿದ್ದೇವೆ. 100 ಜನ ಯುವಕರು ಈಗಾಗಲೇ ನೊಂದಣಿ ಮಾಡಿಕೊಂಡಿದ್ದು, ಇವರು ತಮ್ಮ ಬಿಡುವಿನ ವೇಳೆಯಲ್ಲಿ ಪೊಲೀಸ್‌ರೊಂದಿಗೆ ಚೆಕ್ ಪೋಸ್ಟ್ ಡ್ಯೂಟಿ, ನೈಟ್ ಬೀಟ್ ಡ್ಯೂಟಿ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರಿಗೆ ಸಹಕಾರ ಸೇವೆ ಮಾಡಬಹುದಾಗಿರುತ್ತದೆ. ಪ್ರತಿ ಠಾಣೆಯಲ್ಲಿ ಎಲ್ಲಾ ಬೀಟ್‌ಗೆ ಪ್ರತೇಕ ವಾಟ್ಸ್ಆಪ್ ಗ್ರೂಪ್ ಮಾಡಿದ್ದು, ಅದರ ಉದ್ದೇಶ ಹಾಗೂ ಉಪಯೋಗ ಎಲ್ಲರಿಗೂ ತಿಳಿದಿರಬೇಕು, ನಿಮಗೆ ಏನೇ ಸಮಸ್ಯೆ ಇದ್ದರೆ ಅದರಲ್ಲಿ ಹೇಳಿಕೊಳ್ಳಬಹುದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬೀಟ್ ವಾಟ್ಸ್ಪ್ ಗ್ರೂಪ್‌ಗೆ ಸೇರಿಕೊಳ್ಳಿ ಎಂದು ತಿಳಿಸಿದರು.
ಯಾವುದೇ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ತಪ್ಪುಮಾಡುತ್ತಿದ್ದರೆ ಅವರ ವಿರುದ್ದ ನಿರ್ದಿಷ್ಟ ದೂರುಗಳಿದ್ದರೆ ಕೂಡಲೇ ನಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಮೇಲೆ ಭರವಸೆಯಿಡಿ ಎಂದು ಹೇಳಿದರಲ್ಲದೇ, ಹಬ್ಬದಲ್ಲಿ ಯುವಕರು ತ್ರಿಬಲ್ ರೈಡಿಂಗ್ ಮಾಡುತ್ತಾ ವೇಗವಾಗಿ ಚಲಿಸುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದು, ಇಲಾಖೆ ವತಿಯಿಂದ ಅಂತವರ ಮೇಲೆ ಕೇಸು ದಾಖಲಿಸುವುದಾಗಿ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಮಾಜದ ಹಿರಿಯರು ಯುವಕರಿಗೆ ಇತರೆ ಸಮುದಾಯದವರಿಗೆ ತೊಂದರೆಯಾಗದಂತೆ, ಕಿರಿಕಿರಿಯಾದಂತೆ ನಡೆದುಕೊಳ್ಳಬೇಕು ಎಂದು ಬುದ್ದಿ ಹೇಳಬೇಕು ಇಂಥವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕೆಂದು ಎಂದು ಹೇಳಿದರು.
ಜೂನ್ 7ಕ್ಕೆ ಬಕ್ರೀದ್ ಹಬ್ಬವಿದ್ದು, ಈ ಸಂಬಂಧ ಪೊಲೀಸ್ ಅಧೀಕಾರಿಗಳು ಠಾಣಾ ಮಟ್ಟದಲ್ಲಿ/ವೃತ್ತ ಮಟ್ಟದಲ್ಲಿ, ಉಪವಿಭಾಗ ಮಟ್ಟದಲ್ಲಿ ಶಾಂತಿ ಸಭೆ ಮಾಡಿದ್ದು ಈಗ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿರುತ್ತದೆ. ಹಬ್ಬದ ಸಂಬಂದ ಇಲಾಖಾ ವತಿಯಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ., ಚನ್ನಗಿರಿ ಉಪವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್, ಡಿವೈಎಸ್ಪಿ ಬಿ. ಎಸ್.ಬಸವರಾಜ್, ಶರಣ ಬಸವೇಶ್ವರ ಬಿ, ಪಿ. ಬಿ. ಪ್ರಕಾಶ್, ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು , ವಿವಿಧ ಕೋಮಿನ ಮುಖಂಡರು ಉಪಸ್ಥಿತರಿದ್ದರು.