SUDDIKSHANA KANNADA NEWS/ DAVANAGERE/ DATE:25-03-2025
ದಾವಣಗೆರೆ: ಭಾರತದಲ್ಲಿರುವ ಎಲ್ಲಾ ಧರ್ಮಿಯರು ಭಾರತೀಯರೇ. ನಮ್ಮ ಧರ್ಮ ದೊಡ್ಡದು ಇನ್ನೊಬ್ಬರ ಧರ್ಮ ಸಣ್ಣದು ಎನ್ನುವ ಮನೋಭಾವ ಬಿಟ್ಟು ಸಹೋದರರಂತೆ ಬಾಳ್ವೆ ನಡೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿ ಆಗಬೇಕು ಎಂದು ದಾವಣಗೆರೆ ವಿರಕ್ತ ಮಠ ಹಾಗೂ ಚಿತ್ರದುರ್ಗದ ಬೃಹನ್ಮಠದ ಉಸ್ತುವಾರಿಗಳಾದ ಶ್ರೀಬಸವ ಪ್ರಭು ಸ್ವಾಮೀಜಿ ಸಲಹೆ ನೀಡಿದರು.
ನಗರದ ಅಶೋಕ ರಸ್ತೆಯಲ್ಲಿನ ಕಾಂ.ಸುರೇಶ್, ಕಾಂ. ಶೇಖರಪ್ಪ, ಕಾಂ. ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಕಾಂ. ಪಂಪಾಪತಿ ಭವನದಲ್ಲಿಆಯೋಜಿಸಲಾಗಿದ್ದ ಸೌಹಾರ್ದ ಇಫ್ತಿಯಾರ ಕೂಟದ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತ ದೇಶದ ಎಲ್ಲಾ ಧರ್ಮಿಯರು ಸಮನ್ವಯತೆಯಿಂದ ಬಾಳುವ ಮೂಲಕ ಸಮಾನತೆ ಸಮಗ್ರತೆ ಮತ್ತು ಭಾವೈಕ್ಯತೆಯಿಂದ ಮುನ್ನಡೆಯಬೇಕಾಗಿದೆ. ಮಾತ್ರವಲ್ಲವೇ ಶಾಂತಿಯನ್ನು ಇಡಿ ವಿಶ್ವಕ್ಕೆ ನಮ್ಮ ಏಕತೆ ತೋರಿಸುವ ಮೂಲಕ ಆದರ್ಶ ರಾಷ್ಟ್ರವಾಗಿ ಮೆರೆಯಬೇಕಾಗಿದೆ. ಈ ಮೂಲಕ ನಮ್ಮ ರಾಷ್ಟ್ರವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಎಲ್ಲಾ ಧರ್ಮೀಯರು ಕೇವಲ ಅವರ ಹಬ್ಬಗಳನ್ನು ಮಾತ್ರವಲ್ಲದೆ ಇತರ ಧರ್ಮಗಳ ಹಬ್ಬಗಳನ್ನು ನಮ್ಮ ಹಬ್ಬಗಳೆಂದು ಆಚರಿಸಿದರೆ ಯಾವುದೇ ಗೊಂದಲ ಸೃಷ್ಟಿ ಆಗುವುದಿಲ್ಲ. ಇದರಿಂದ ಸೋದರತ್ವ ಬೆಳೆದು ದೇಶ ಸದೃಢವಾಗುತ್ತದೆ.
ಕಾರಣ ನಾವು ನಮ್ಮ ಧರ್ಮ ಶ್ರೇಷ್ಠ ಇನ್ನೊಬ್ಬರ ಧರ್ಮ ಕನಿಷ್ಠ ಎನ್ನುವ ಮನೋಭಾವವನ್ನು ಬಿಡಬೇಕಿದೆ ಎಂದು ಹೇಳಿದರು.
ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ರಾಘವೇಂದ್ರ ಕೆ. ನಾಯರಿ ಮಾತನಾಡಿ, ನಮ್ಮ ದೇಶ ಬಲಾಢ್ಯವಾಗಿ ಬೆಳೆಯಬೇಕಾಗಿದೆ. ಈ ದೇಶದ ಅವಿಭಾಜ್ಯ ಅಂಗ ಮುಸ್ಲಿಮರು ಕೂಡ. ಯಾವುದೇ ವದಂತಿಗಳಿಗೆ ಕಿವಿ ಕೊಡದೆ ತ್ಯಾಗ ಮತ್ತು
ಬಲಿದಾನದ ಪ್ರತೀಕವಾದ ಶಾಂತಿಯಿಂದ ಆಚರಿಸಬೇಕು. ಯಾವುದೇ ಜಾತಿ ಧರ್ಮ ಮತಗಳು ಹೇಳುವುದು ಶಾಂತಿಯನ್ನು ಮಾತ್ರವಲ್ಲದೆ ಬಹುತ್ವ ಬಂದು ಹೋಗಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ವಾಮದೇವಪ್ಪ ಮಾತನಾಡಿ, ಯಾವುದೇ ಧರ್ಮರಾಗಲಿ ಕರ್ನಾಟಕದಲ್ಲಿದ್ದರೆ ಅವರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲೇಬೇಕು. ಕನ್ನಡ ಕಸ್ತೂರಿ ಇದ್ದಂತೆ. ಇದು ನಮ್ಮ ಮಾತೃಭಾಷೆಯಾಗಿದೆ ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ವ್ಯವಹಾರಿಕವಾಗಿ ಕನ್ನಡ ಭಾಷೆಯನ್ನೇ ನಾವು ಮಾತನಾಡಬೇಕಾಗಿದೆ.ಆ ಮೂಲಕ ನಾವು ವಿವಿಧತೆಯಲ್ಲಿ ಏಕತೆಯನ್ನು ತೋರಿಸುವ ನಿಟ್ಟಿನಲ್ಲಿ ಹಬ್ಬಗಳನ್ನು ಆಚರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ರಜಾವುಲ್ಲಾ-ಮುಸ್ತಫಾ-ದ-ಬರ್ಕಾತಿಯಾ ದಾರುಲ್ ಯತಾಮಾ ಇದರ ಸಂಸ್ಥಾಪಕ ಅಧ್ಯಕ್ಷ ಮೌಲಾನ್ ಮಹಮ್ಮದ್ ಹನೀಫ್ ರಜ್ಜಾ ಖಾದ್ರಿ ಸಾನಿಧ್ಯ ವಹಿಸಿದ್ದರು. ರೈತ-ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಜಿ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಭಾರತ್ ಕಮ್ಯೂನಿಸ್ಟ್ ಪಕ್ಷ ಮತ್ತು ರೈತ-ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ಜಿ.ಯಲ್ಲಪ್ಪ, ಅಬ್ದುಲ್ ಹಮೀದ್, ಪೀರ್ ಸಾಬ್ ಬಾಗೂರ್, ವಕೀಲರು,ಎಂ. ಖಾದರ್ ಬಾಷ, ಎಸ್. ಆನಂದಪ್ಪ, ಬಿ.ಅಜೇಯ,ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರದಾನ ಕಾರ್ಯದರ್ಶಿ ಎಂ.ವೈ. ಸತೀಶ್, ರಮೇಶ್ ಸಿ ದಾಸರ್, ನರೇಗಾ ರಂಗನಾಥ್, ,ಸರೋಜಾ, ಐರಣಿ ಚಂದ್ರು, ಹೆಚ್.ಪಿ. ಉಮಾಪತಿ, ದಾದಾಪೀರ್, ಸುರೇಶ್ ಮುದಹದಡಿ, ಶಿವಕುಮಾರ್ ಡಿ.ಶೆಟ್ಟರ್, ಎಸ್.ಎಂ.ಸಿದ್ದಲಿಂಗಪ್ಪ, ಕೆಜೆಡಿ ಬಸವರಾಜ್, ಕೆ.ಜಿ.ಶಿವಮೂರ್ತಿ, ಮಹಮ್ಮದ್ ರಫೀಕ್, ವಿಶ್ವನಾಥ್ ಇತರರು ಇದ್ದರು.