SUDDIKSHANA KANNADA NEWS/ DAVANAGERE/ DATE:28-10-2024
ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನ ಕಿಟಕಿ ಸರಳು ಮುರಿದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನಡೆದಿದ್ದು, ನಗದು ಕಳ್ಳತನ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್‌ನ ಕಿಟಕಿ ಸರಳುಗಳನ್ನು ಮುರಿದು ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ಖದೀಮರು ಕದ್ದೊಯ್ದಿದ್ದು, ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ನ್ಯಾಮತಿ ಪಟ್ಟಣದ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಕಿಟಕಿಯ ಸರಳುಗಳನ್ನು ಮುರಿದು ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಲಾಕರ್ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ ಎಂದು ಹೇಳಲಾಗಿದೆ ಇಷ್ಟೇ ಅಲ್ಲದೇ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿರುವ ಕಳ್ಳರು ಬ್ಯಾಂಕ್‌ನ ಒಳಗಡೆ ಕಾರದಪುಡಿ ಚೆಲ್ಲಿ ಹೋಗಿದ್ದಾರೆ.
ಈ ಬಗ್ಗೆ ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಪಕ್ಕದ ಕಿಟಕಿ ಮುರಿದು ಬ್ಯಾಂಕ್ ಲಾಕರ್‌ನಲ್ಲಿಟ್ಟ ಗ್ರಾಹಕರ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್, ನ್ಯಾಮತಿ ಪಿಐ ಎನ್.ಎಸ್.ರವಿ ಪಿಎಸ್‌ಐ ಜಯಪ್ಪನಾಯ್ಕ , ದಾವಣಗೆರೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ಮುಂದುವರೆಸಿದ್ದಾರೆ.
ಎರಡು ಕಿಲೋಮೀಟರ್ ದೂರದವರೆಗೆ ಹೋದ ಶ್ವಾನ ಆ ಬಳಿಕ ನಿಂತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಬ್ಯಾಂಕ್‌ನವರ ಅಧಿಕೃತ ಮಾಹಿತಿಯ ನಂತರ ನಿಖರ ಮಾಹಿತಿ ತಿಳಿಯಲಿದೆ. ಎಲ್ಲಾ ರೀತಿಯಲ್ಲಿಯೂ ಯೋಜನೆ ರೂಪಿಸಿ ಕಳ್ಳರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.