SUDDIKSHANA KANNADA NEWS/ DAVANAGERE/ DATE:01-12-2024
ತಿರುಮಲ: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಬೆಟ್ಟದ ಮೇಲಿನ ದೇವಾಲಯದ ಪವಿತ್ರತೆ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಕಾಪಾಡಲು ವೆಂಕಟೇಶ್ವರ ದೇವಸ್ಥಾನದಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಇದು ಮುಂದುವರಿದ ಭಾಗವಾಗಿ ರಾಜಕೀಯ ಮತ್ತು ದ್ವೇಷದ ಭಾಷಣಗಳನ್ನು ದೇವಸ್ಥಾನದ ಸನ್ನಿಧಿಯಲ್ಲಿ ನಿಷೇಧಿಸಲಾಗಿದ್ದು, ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಮುನ್ನಚ್ಚರಿಕೆ ವಹಿಸಲು ತೀರ್ಮಾನಿಸಲಾಗಿದೆ.
ಪ್ರತಿದಿನ ಸರಾಸರಿ 60,000 ಭಕ್ತರ ಬರುವ ದೇವಾಲಯವು ಲಡ್ಡೂ ನೈವೇದ್ಯ ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ ಆರೋಪದ ಮೇಲೆ ರಾಜಕೀಯ ವಿವಾದದ ಕೇಂದ್ರವಾಗಿತ್ತು. ರಾಜಕೀಯ ಮುಖಂಡರು ಸೇರಿದಂತೆ ವ್ಯಕ್ತಿಗಳು
ದೇವಸ್ಥಾನದ ಮುಂದೆ ಹೇಳಿಕೆ ನೀಡಿ ಅದರ ದೈವಿಕ ವಾತಾವರಣಕ್ಕೆ ಅಡ್ಡಿಪಡಿಸಿದ ನಿದರ್ಶನಗಳ ನಂತರ ಈ ಆದೇಶ ಹೊರಡಿಸಲಾಗಿದೆ ಎಂದು ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ
”ಸದಾ ಗೋವಿಂದ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಮುಖಂಡರು ತಿರುಮಲ ದೇಗುಲದಲ್ಲಿ ದರ್ಶನ ಪಡೆದ ಬಳಿಕ ದೇವಸ್ಥಾನದ ಮುಂಭಾಗದಲ್ಲಿ
ಮಾಧ್ಯಮಗಳ ಮುಂದೆ ರಾಜಕೀಯ ಹಾಗೂ ದ್ವೇಷದ ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ತಿರುಮಲದಲ್ಲಿ ಆಧ್ಯಾತ್ಮಿಕ ವಾತಾವರಣವಿದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಈ ನಿರ್ದೇಶನದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ತಿತುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಆರಂಭಿಸಿದೆ. ಆರೋಪಗಳ ತನಿಖೆಗೆ ಸ್ವತಂತ್ರ ಎಸ್‌ಐಟಿ ರಚಿಸುವ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಸಿಬಿಐ ಸಮಿತಿಯನ್ನು ರಚಿಸಿತ್ತು.
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದಲ್ಲಿ ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಸೆಪ್ಟೆಂಬರ್‌ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿ ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದರು. ಆರೋಪಗಳಿಗೆ ಪ್ರತಿಕ್ರಿಯಿಸಿದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ನಾಯ್ಡು “ಹೇಯ ಆರೋಪಗಳನ್ನು” ಮಾಡಿದೆ ಎಂದು ಟೀಕಿಸಿತು, ಆದರೆ ಆಡಳಿತಾರೂಢ ತೆಲುಗು ದೇಶಂ ಪಕ್ಷವು ತನ್ನ ಸಮರ್ಥನೆಯನ್ನು ಸಾಬೀತುಪಡಿಸಲು ಪ್ರಯೋಗಾಲಯ ವರದಿಯನ್ನು ಪ್ರಸಾರ ಮಾಡಿದೆ.