SUDDIKSHANA KANNADA NEWS/ DAVANAGERE/ DATE:07-01-2024
ದಾವಣಗೆರೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರಸೇವಕರು, ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿರುವುದು ಹಾಗೂ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ವಿರೋಧಿಸಿ ಜ.8ರಂದು ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು, ಇದು ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿಸಿರುವ ಪ್ರತಿಭಟನೆ ಅಲ್ಲ. ಹಿಂದೂಗಳು, ಕರಸೇವಕರು, ಶ್ರೀರಾಮಭಕ್ತರು ನಡೆಸುತ್ತಿರುವ ಹೋರಾಟ. ಬೆಳಗ್ಗೆ 10.30ಕ್ಕೆ ನಗರದ ಪಿ.ಜೆ.ಬಡಾವಣೆಯ ಶ್ರೀರಾಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರು, ಕರಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡು ಪ್ರಭು ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ನಾವು ಭಯೋತ್ಪಾದಕರಲ್ಲ, ಶಾಂತಪ್ರಿಯರು. ಹಿಂದೂಗಳು. ಕಾನೂನು ಕೈಗೆತ್ತಿಕೊಳ್ಳದೇ ಶಾಂತಯುತವಾಗಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಕಾಂಗ್ರೆಸ್ ಮುಖಂಡರೂ ಪಾಲ್ಗೊಳ್ಳಿ. ಪ್ರಭು ಶ್ರೀರಾಮಚಂದ್ರ ಒಳ್ಳೆಯದು ಮಾಡುತ್ತಾನೆ. ಬೆಳಿಗ್ಗೆ 10. 30ಕ್ಕೆ ಶ್ರೀರಾಮಮಂದಿರದಿಂದ ಭಜನೆ, ಘೋಷಣೆ ಮೂಲಕ ಮೆರವಣಿಗೆ ನಡೆಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಪಾಲ್ಗೊಳ್ಳಬೇಕು. ತಾಕತ್ತಿದ್ದರೆ ನಮ್ಮನ್ನು ಸರ್ಕಾರ ಬಂಧಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದು, ತಾಲಿಬಾನ್ ಆಡಳಿತ ನಡೆಸುತ್ತಿದೆ, ತುಘಲಕ್ ದರ್ಬಾರ್ ಸರ್ಕಾರ ಇದು. ಸಿದ್ದರಾಮಯ್ಯನವರು ಕರಸೇವಕರು, ಶ್ರೀರಾಮನ ಭಕ್ತರು ಕ್ರಿಮಿನಲ್ಸ್ ಅಂತಾರೆ. ಡಿ. ಕೆ. ಶಿವಕುಮಾರ್ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಗಲಭೆಕೋರರು ಅಮಾಯಕರು, ಸಹೋದರರು ಎನ್ನುತ್ತಾರೆ. ಇಂಥ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳ ವಿರೋಧಿ ಸರ್ಕಾರ ಆಗಿದ್ದು, ಇದು ತೊಲಗಬೇಕು ಎಂದು ಹೇಳಿದರು.
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೋರಾಟ ಜೋರು ಮಾಡುತ್ತೇವೆ. ರೈತರಿಗೆ ಕೇವಲ 105 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳಿಗೆ ನೀಡಲು ಹಣ ಇಲ್ಲ. ಮುಸ್ಲಿಂರಿಗೆ ನೀಡಲು ಹಣವಿದೆ. ಇದು ಯಾವ ನ್ಯಾಯ. ರೈತರಿಗೆ ಪರಿಹಾರವಾಗಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದರು.