SUDDIKSHANA KANNADA NEWS/ DAVANAGERE/ DATE:09-01-2025
ಬೆಂಗಳೂರು: ಶೋಷಿತರನ್ನು ಮತ ಬ್ಯಾಂಕ್ ಅನ್ನಾಗಿ ಮಾಡಿಕೊಂಡು ಅಧಿಕಾರದ ಸವಿ ಅನುಭವಿಸುತ್ತಿರುವ ಕಾಂಗ್ರೆಸ್ ಗೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ ಸಂವಿಧಾನ ಗೌರವ ಅಭಿಮಾನಕ್ಕೆ ಚಾಲನೆ” ಕಾರ್ಯಕ್ರಮ ಮತ್ತು ಸಂವಿಧಾನ ಗೌರವ
ಅಭಿಯಾನ 2025 – ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಕಾಂಗ್ರೆಸ್
ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯಪೀಳಿಗೆಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ದೇಶಾದ್ಯಂತ ಪಕ್ಷ ಆರಂಭಿಸಿರುವ ಶ್ರೇಷ್ಠ ಸಂವಿಧಾನ ಗೌರವ ಅಭಿಮಾನವನ್ನು ರಾಜ್ಯದಲ್ಲಿಯೂ ಯಶಸ್ವಿಗೊಳಿಸುವ ಸಂಕಲ್ಪ ಮಾಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಬಿ. ಎಲ್. ಸಂತೋಷ್, ಸಂಸದ ಬಸವರಾಜ್ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್. ಅಶೋಕ,ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಿಡಿಎಂ ಗೋವಿಂದ ಕಾರಜೋಳ, ರಾಜ್ಯ ಉಪಾಧ್ಯಕ್ಷರು ಹಾಗೂ ಸಂವಿಧಾನ ಗೌರವ ಅಭಿಯಾನದ ರಾಜ್ಯ ಸಂಚಾಲಕ ಎನ್.ಮಹೇಶ್ ಅವರು ಸೇರಿದಂತೆ ಪಕ್ಷದ ಶಾಸಕರು, ಸಂಸದರು, ಪದಾಧಿಕಾರಿಗಳು ಉಪಸ್ಥಿತರಿದ್ದರು.