SUDDIKSHANA KANNADA NEWS/ DAVANAGERE/ DATE:06-03-2025
ಬೆಂಗಳೂರು: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರ ವಿರುದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಬಂಡೆದಿದ್ದಾರೆ. ಮಾತ್ರವಲ್ಲ, ಬಿ ಎಸ್ ವೈ ಕುಟುಂಬದ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ತಂತ್ರಗಾರಿಕೆ ರೂಪಿಸುತ್ತಿರುವ ಯತ್ನಾಳ್ ಅಂಡ್ ಟೀಂ ವರಿಷ್ಠರಿಗೆ ದೂರು ಕೊಟ್ಟಿದೆ. ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗುತ್ತಿದ್ದಂತೆ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ವಿಜಯೇಂದ್ರ ಅಂಡ್ ಟೀಂಗೆ ಮಗ್ಗುಲ ಮುಳ್ಳಾಗಿರುವ ಯತ್ನಾಳ್ ಅಂಡ್ ಟೀಂಗೆ ಹೆಚ್ಚಿನ ಮಹತ್ವ ಹೈಕಮಾಂಡ್ ಕೊಟ್ಟಿಲ್ಲ. ವಾರ್ನಿಂಗ್ ಸಹ ಕೊಟ್ಟಿದೆ. ಇದರಿಂದ ತಲೆಬಿಸಿಯಾಗಿದ್ದು, ಯತ್ನಾಳ್ ಮಾಧ್ಯಮದವರ ವಿರುದ್ಧವೂ ಪದೇ ಪದೇ ಹರಿಹಾಯುತ್ತಿದ್ದಾರೆ. ಬಿಜೆಪಿಗೂ ಮಗ್ಗುಲ ಮುಳ್ಳಾಗಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಅಸಲಿಗೆ ಲಿಂಗಾಯತರಲ್ಲ ಎನ್ನುವ ಹೊಸ ಬಾಂಬ್ ಅನ್ನು ಯತ್ನಾಳ್ ಸಿಡಿಸಿದ್ದಾರೆ. “ಯಡಿಯೂರಪ್ಪನವರು ಲಿಂಗಾಯತರೇ ಅಲ್ಲ, ಮಂಡ್ಯ ಜಿಲ್ಲೆಯ ಅವರ ಹುಟ್ಟೂರಾದ ಬೂಕನಕೆರೆಗೆ ಹೋಗಿ ಅಲ್ಲಿನ ಜನರನ್ನು ಕೇಳಿದರೆ ಗೊತ್ತಾಗುತ್ತದೆ. ಅವರು, ಬಳೆಗಾರ ಶೆಟ್ಟರು. ಸಮುದಾಯದವರು ಅನಿವಾರ್ಯವಾಗಿ ಅವರನ್ನು ಒಪ್ಪಿಕೊಂಡರು ಎಂದು ಹೇಳುವ ಮೂಲಕ ಹೊಸ ತಗಾದೆ ಆರಂಭಿಸಿದ್ದಾರೆ.
ವೀರೇಂದ್ರ ಪಾಟೀಲರು, ಜೆ.ಎಚ್.ಪಟೇಲರು ಕಾಲವಾದ ನಂತರ, ಸಮುದಾಯದಲ್ಲಿ ಸಮರ್ಥ ನಾಯಕರು ಇರಲಿಲ್ಲ. ನಮ್ಮ ಸಮುದಾಯದವರು ಬೇರೆ ನಾಯಕರು ಇಲ್ಲದೇ, ಇವರನ್ನೇ ತಮ್ಮ ನಾಯಕರು ಎಂದು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಅಸಲಿಗೆ, ಯಡಿಯೂರಪ್ಪ ನಮ್ಮ ಸಮುದಾಯದವರಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಾಂಗ್ರೆಸ್ಸಿನಲ್ಲಿ ಶಾಮನೂರು ಶಿವಶಂಕರಪ್ಪ, ಬಿಜೆಪಿಯಲ್ಲಿ ಯಡಿಯೂರಪ್ಪ, ಇವರಿಬ್ಬರೂ ಲಿಂಗಾಯತರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಯೇ ಹೊರತು ಸಮುದಾಯಕ್ಕೆ ಈ ಇಬ್ಬರು ನಾಯಕರಿಂದ ಏನೂ ಪ್ರಯೋಜನವಿಲ್ಲ. ಇವರದ್ದು ಕುಟುಂಬ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಾತಿ ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಅವರೆಲ್ಲ ಕೇವಲ ಶಾಸಕರು ಹಾಗೂ ಮಾಜಿ ಸಚಿವರು ಆಗಿದ್ದಾರೆ ಎಂದು ಎಲ್ಲೂ ಯತ್ನಾಳ್ ಹೆಸರು ಹೇಳದೆ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.