SUDDIKSHANA KANNADA NEWS/ DAVANAGERE/ DATE:24-10-2024
ಬೆಂಗಳೂರು: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಣಕಣ ರಂಗೇರಿದೆ. ಶಾಸಕ ವಿನಯ್ ಕುಲಕರ್ಣಿ ಪುತ್ರಿಗೆ ಟಿಕೆಟ್ ನೀಡಲಾಗುತ್ತದೆ ಎಂದುಕೊಂಡಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದೆ.
ಚನ್ನಪಟ್ಟಣದಲ್ಲಿ ಒಕ್ಕಲಿಗ ಸಮುದಾಯದ ಸಿ. ಪಿ. ಯೋಗೇಶ್ವರ್, ಸಂಡೂರು ಕ್ಷೇತ್ರದಿಂದ ತುಕರಾಮ್ ಪತ್ನಿ ಹಾಗೂ ಶಿಗ್ಗಾವಿನಿಂದ ಯಾರಿಸ್ ಅಹ್ಮದ್ ಖಾನ್ ಪಠಾಣ್ ಗೆ ಟಿಕೆಟ್ ನೀಡಲಾಗಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ವಿನಯ್ ಕುಲಕರ್ಣಿ ಪುತ್ರಿ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು, ಅವರಿಗೆ ಟಿಕೆಟ್ ನೀಡುತ್ತೆ ಎಂದು ಹೇಳಲಾಗಿತ್ತಾದರೂ ಅಂತಿಮವಾಗಿ ಊಹಾಪೋಹಕ್ಕೆ ತೆರೆಬಿದ್ದಿದೆ.
ಶಿಗ್ಗಾವಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಬಿ ಫಾರಂ ವಿತರಿಸಿದರು. ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಕರ್ನಾಟಕದಲ್ಲಿ ಹೊಸ
ಅಧ್ಯಾಯವನ್ನೇ ಆರಂಭಿಸಿದ್ದು, ಖಂಡಿತವಾಗಿಯೂ ಶಿಗ್ಗಾವಿ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಡಿಕೆಶಿ ಹೇಳಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಸಹ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.
ತಮ್ಮ ಗೆಲುವಿಗಾಗಿ ರಾಜ್ಯದ ಕಾಂಗ್ರೆಸ್ ಪಕ್ಷ ಒಗ್ಗೂಡಿ ಶ್ರಮಿಸಲಿದೆ. ಶಿಗ್ಗಾವಿ ಜನರ ಪ್ರತಿನಿಧಿಯಾಗಿ ತಾವು ವಿಧಾನಸಭೆ ಪ್ರವೇಶಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.