SUDDIKSHANA KANNADA NEWS/ DAVANAGERE/ DATE:04-03-2025
ಬೆಂಗಳೂರು: ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಸರ್ಕಾರ ಎಂದು ಅಪಪ್ರಚಾರದ ಜಾಲ ವಿಸ್ತರಿಸಿ ಅಧಿಕಾರಕ್ಕೆ ಬಂದವರು ನೀವು. ನಿಮ್ಮ ಅವಧಿಯಲ್ಲಿ 80 % ಕಮಿಷನ್ ದಂಧೆ ನಡೆಯುತ್ತಿದೆ ಎಂದು ಸ್ವತಃ ಗುತ್ತಿಗೆದಾರರೇ ನಿಮ್ಮ ಮುಂದೆ ದೂರಿಕೊಂಡರೂ ಅದನ್ನು ಲಘುವಾಗಿ ಪರಿಗಣಿಸಿರುವ ನೀವು ಕಮಿಷನ್ ನೀವೇಕೆ ನೀಡುತ್ತೀರಿ? ಎಂದು ಗುತ್ತಿಗೆದಾರರನ್ನೇ ಬೆದರಿಸಿದ್ದೀರಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಖಾಲಿಯಾಗಿರುವ ಸರ್ಕಾರದ ಖಜಾನೆಯಲ್ಲಿ ಅಭಿವೃದ್ಧಿಗಾಗಿ ಬಳಸಲು ಬಿಡಿಗಾಸೂ ಇಲ್ಲ, ಇನ್ನು ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲು ಹಣವಿಲ್ಲದ ಪರಿಸ್ಥಿತಿ ಇರುವುದು ಅಸಲಿ ಸತ್ಯ,ಆದಾಗ್ಯೂ ಕಮಿಷನ್ ಪಾವತಿಸಿದರೆ ಮಾತ್ರ ಹೇಗಾದರೂ ಮಾಡಿ ಬಿಲ್ ಕೊಡಿಸುವುದಾಗಿ ಅಧಿಕಾರಿಗಳ ಮೂಲಕ ಸಂಕಷ್ಟಿತ ಗೊತ್ತಿಗೆದಾರರ ಬೆನ್ನು ಹತ್ತಲಾಗಿದೆ, ಇದನ್ನು ನೇರಾ ನೇರ ನಿಮ್ಮ ಮುಂದೆಯೇ ಗುತ್ತಿಗೆದಾರರು ಅನಾವರಣ ಮಾಡುತ್ತಿದ್ದಾರೆ. ನಿಮ್ಮ ಉಡಾಫೆಯ ಉತ್ತರ ಹಿಂದಿನ ಸರ್ಕಾರದ ಮೇಲೆ ಜವಾಬ್ದಾರಿ ಹೊರಿಸಿ ನುಣಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಹೇಗಾದರೂ ಸ್ವಲ್ಪ ಹಣವನ್ನಾದರೂ ಹೊಂದಿಸಿಕೊಡುವುದಾಗಿ ಅಸ್ಪಷ್ಟ ಭರವಸೆ ನೀಡಿದ್ದೀರಿ, ಇಂತಹ ದಾರುಣ ಪರಿಸ್ಥಿತಿ ಕರ್ನಾಟಕ ಇತಿಹಾಸದಲ್ಲಿ ಯಾವ ಸರ್ಕಾರಕ್ಕೂ ಬಂದಿರಲಿಲ್ಲ, ಕಾಮಗಾರಿ, ಕಾರ್ಯಕ್ರಮಗಳು, ಯೋಜನೆಗಳು ಯಾರ ಅವಧಿಯಲ್ಲಿ ಆರಂಭಿಸಿದ್ದು ಎಂಬುದು ಮುಖ್ಯವಲ್ಲ, ಅದೊಂದು ಸರ್ಕಾರದ ವ್ಯವಸ್ಥೆಯ ನಿರಂತರ ಪ್ರಕ್ರಿಯೆ. ಇದರಲ್ಲಿ ಪಾರದರ್ಶಕ ನಿಯಮ ಅನುಸರಿಸಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆ ಸರ್ಕಾರ, ಈ ಸರ್ಕಾರವೆನ್ನದೇ ಸಾಲ ಸೋಲ ಮಾಡಿ ಬಂಡವಾಳ ತೊಡಗಿಸಿರುವ ಗುತ್ತಿಗೆದಾರರ ಕತ್ತು ಹಿಸುಕುವುದು ಯಾವ ಸರ್ಕಾರಕ್ಕೂ ಗೌರವ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್’ಗಳನ್ನು ಅತಿ ಹೆಚ್ಚು ಬಾರಿ ಮಂಡಸಿರುವ ದಾಖಲೆ ಮುಡಿಗೇರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯರು ಗುತ್ತಿಗೆದಾರರ ಬಿಲ್ ಪಾವತಿಸಲಾಗದ ಪರಿಸ್ಥಿತಿಯಲ್ಲಿರುವುದು ಶೋಚನೀಯ ಎನಿಸಿದೆ. ಈಗಾಗಲೇ ಹಲವಾರು ಗುತ್ತಿಗೆದಾರರು ಬಿಲ್ ಪಾವತಿಯಾಗದ ಪರಿಸ್ಥಿತಿಯಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೆಲವರು ದಯಾಮರಣ ಕೋರಿದ್ದಾರೆ, ಮುಂದಿನ ದಿನಗಳಲ್ಲಿ ದುರಂತಗಳು ಸಂಭವಿಸಿದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂಬ ಎಚ್ಚರಿಕೆ ನಿಮಗಿರಲಿ. ಈ ಕೂಡಲೇ ಸಂಕಷ್ಟಿತ ಗುತ್ತಿಗೆದಾರರ ಬಿಲ್ ಪಾವತಿಸುವ ಮಾರ್ಗವನ್ನು ಅತೀ ಜರೂರಾಗಿ ಕಂಡುಹಿಡಿದು ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರ್ಸೆಂಟೇಜ್ ಅಪಪ್ರಚಾರ ನಡೆಸಿದ ನೀವು ಕಾಂಗ್ರೆಸ್ ಸರ್ಕಾರವೆಂದರೆ ಪರ್ಸೆಂಟೇಜ್ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಗ್ಗೆ ರಾಜ್ಯದ ಜನತೆಗೆ ಏನೆಂದು ಉತ್ತರಿಸುವಿರಿ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.