SUDDIKSHANA KANNADA NEWS/ DAVANAGERE/ DATE-26-04-2025
ದಾವಣಗೆರೆ: ಸರಣಿ ಕಳ್ಳತನ ಮಾಡಿದ್ದ ಭಾರತ್ ಕಾಲೋನಿಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು ರೂ. 14,50,000 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ಭಾರತ ಕಾಲೋನಿಯ ಆಟೋ ಚಾಲಕ ಡಿ. ಪಿ. ಅರುಣ ಕುಮಾರ (28), ಲಾರಿ ಚಾಲಕ ಬಕ್ಕೇಶ (29) ಬಂಧಿತ ಆರೋಪಿ.
ಕಳೆದ 22ರಂದು ಬೆಳಿಗ್ಗೆ 11.30ರ ಸುಮಾರಿನಲ್ಲಿ ಪುಷ್ಪ ಎಸ್.ಎಸ್ ಲೇಔಟ್ ‘ಬಿ’ ಬ್ಲಾಕ್ ನಲ್ಲಿ ಇರುವ ಚೌಡಮ್ಮನ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ಮುಗಿಸಿಕೊಂಡು ಎಸ್.ಎಸ್ ಲೇಔಟ್ ಬಿ ಬ್ಲಾಕ್ 4 ನೇ ಮೇನ್ 12 ನೇ ಕ್ರಾಸ್ ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಸ್ಕೂಟರ್ ಸವಾರ ಹಿಂದಿನಿಂದ ಬಂದು ಕೊರಳಿಗೆ ಏಕಾಏಕಿ ಕೈ ಹಾಕಿ ಕೊರಳಲ್ಲಿ ಇದ್ದ ಸುಮಾರು 30 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಾಗಿತ್ತು.
ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಭಾರತ್ ಕಾಲೋನಿಯ ಅರುಣ ಕುಮಾರ, ಬಕ್ಕೇಶನನ್ನು ಬಂಧಿಸಿದ್ದಾರೆ.
ಒಟ್ಟು 6 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 176 ಗ್ರಾಂ ತೂಕದ 14,00,000 ರೂ ಬೆಲೆಯ ಬಂಗಾರದ ಆಭರಣ ಹಾಗು ಕೃತ್ಯಕ್ಕೆ ಉಪಯೋಗಿಸಿದ 50 ಸಾವಿರ ರೂ ಬೆಲೆಯ ಒಂದು ಹೊಂಡಾ ಆಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಶಿಲ್ಪಾ ವೈ.ಎಸ್., ಪಿಎಸ್‌ಐಗಳಾದ ವಿಶ್ವನಾಥ ಜಿ. ಎನ್., ವಿಜಯ ಎಂ., ನಾಗರಾಜ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಂ, ಮಲ್ಲಿಕಾರ್ಜುನ ಚಂದ್ರಪ್ಪ, ಬೋಜಪ್ಪ, ಆಕಾಶ ಪಿ, ಬಸವರಾಜ, ರವಿಕುಮಾರ, ಗುಡ್ಡಪ್ಪ, ಮಾರುತಿ, ಸೋಮು ಆರ್, ರಾಘವೇಂದ್ರ, ಜಿಲ್ಲಾ ಪೋಲೀಸ್ ಕಛೇರಿಯ ರಾಮಚಂದ್ರ ಜಾಧವ, ಶಿವಕುಮಾರ, ರಮೇಶ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.