SUDDIKSHANA KANNADA NEWS/ DAVANAGERE/ DATE:25-01-2025
ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿನ ಭಿನ್ನಮತ ಮತ್ತೊಂದು ಸ್ವರೂಪ ಪಡೆದಿದೆ. ಜಿಲ್ಲೆಯ ದಾವಣಗೆರೆ ಉತ್ತರ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡದಲ್ಲಿ ಮಂಡಲ ಅಧ್ಯಕ್ಷರ ಘೋಷಣೆ ವಿಚಾರ ಎರಡು ಬಣಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು. ಆದ್ರೆ, ಈಗ ರಾಜ್ಯ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಅವರು ಚುನಾವಣಾ ಸಹ ಉಸ್ತುವಾರಿ ಯಶವಂತರಾವ್ ಜಾಧವ್ ಘೋಷಿಸಿದ ಮಂಡಲ ಅಧ್ಯಕ್ಷರು ಘೋಷಣೆ ಅಸಿಂಧು ಎಂದು ಪ್ರಕಟಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದಾದ್ಯಂತ ಸಂಘಟನಾ ಪರ್ವ-2024ರ ಚಟುವಟಿಕೆಗಳು ನಡೆದುಕೊಂಡು ಬಂದಿತ್ತು. ಆದ್ರೆ, ಯಶವಂತರಾವ್ ಜಾಧವ್ ಅವರನ್ನು ದಾವಣಗೆರೆ
ಸಂಘಟನಾತ್ಮಕ ಜಿಲ್ಲೆಯ ಸಂಘಟನಾ ಪರ್ವದ ಯಶಸ್ವಿ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಸಹ-ಚುನಾವಣಾಧಿಕಾರಿಯನ್ನಾಗಿ ಈ ಹಿಂದೆ ಘೋಷಿಸಲಾಗಿರುತ್ತದೆ. ಆದ್ರೆ, ದಾವಣಗೆರೆ ಜಿಲ್ಲೆಯ ಮಂಡಲಗಳ ಸಮಿತಿ ರಚನೆಯ ಸಂದರ್ಭದಲ್ಲಿ ತಾವು ನಿಯಮ ಮೀರಿ, ಏಕಪಕ್ಷೀಯವಾಗಿ ಖಾಸಗಿ ಅತಿಥಿ ಗೃಹವೊಂದರಲ್ಲಿ ಸಭೆ ನಡೆಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಶವಂತರಾವ್ ಜಾಧವ್ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಪತ್ರಿಕಾಗೋಷ್ಠಿ ನಡೆಸಿ, 5 ಮಂಡಲಗಳ ಅಧ್ಯಕ್ಷರನ್ನು ಘೋಷಿಸಿರುವುದು ರಾಜ್ಯ ಸಮಿತಿಯ ಗಮನಕ್ಕೆ ಬಂದಿರುತ್ತದೆ. ತಮ್ಮ ಏಕಪಕ್ಷೀಯ ನಿರ್ಣಯವು ಪಕ್ಷದ ಶಿಸ್ತು ಮತ್ತು ಚುನಾವಣಾ ನಿಯಮದ ಉಲ್ಲಂಘನೆ ಆಗಿರುವುದರಿಂದ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ತಮ್ಮನ್ನು ದಾವಣಗೆರೆ ಜಿಲ್ಲೆಯ ಸಹ-ಚುನಾವಣಾಧಿಕಾರಿ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾವು ಅನಧಿಕೃತವಾಗಿ ಪ್ರಕಟಿಸಿರುವ ಮಂಡಲ ಸಮಿತಿಯನ್ನು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಗಣೇಶ್ ಕಾರ್ಣಿಕ್ ನೀಡಿರುವ ನೊಟೀಸ್ ನಲ್ಲಿ ಘೋಷಿಸಿದ್ದಾರೆ.