SUDDIKSHANA KANNADA NEWS/ DAVANAGERE/ DATE:21-10-2024
ದಾವಣಗೆರೆ: ಜಿಲ್ಲೆ ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನಗರದ ಕೆ. ಆರ್. ಮಾರುಕಟ್ಟೆಯ ಬೀದಿಬದಿ ವ್ಯಾಪಾರಸ್ಥರ ಕಛೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಅವರು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿಕೋಟ್ಯಾಂತರ ಜನ ಅಸಂಘಟಿತ ವಲಯದಲ್ಲಿದ್ದು ಅವರೆಲ್ಲರೂ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೀದಿಬದಿ ವ್ಯಾಪಾರಸ್ಥರು ಸಹ ಈ ಯೋಜನೆಗೆ ನೊಂದಾಯಿಸಿಕೊಳ್ಳಬೇಕೆಂದರು.
ಬೀದಿಬದಿ ವ್ಯಾಪಾರಸ್ಥರ ಸಂಘದ ಸಲಹೆಗಾರರಾದ ಮಂಜುನಾಥ್ ಕೈದಾಳೆ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಪ್ರತಿನಿತ್ಯ ಹೆಚ್ಚಿನ ಮಟ್ಟದಲ್ಲಿ ಸುಂಕವನ್ನು ಕಟ್ಟುತ್ತಿದ್ದು, ಇದೇ ಹಣದಲ್ಲಿ ಕಲ್ಯಾಣ ಮಂಡಳಿಯನ್ನು ನಿರ್ಮಿಸಬೇಕು. ಆ ಮೂಲಕ ಬಡ ವ್ಯಾಪಾರಸ್ಥರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕೆಂದು ಕಾರ್ಮಿಕ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಸಾಬ್ ಮಾತನಾಡಿದರು. ಗೌರವಾಧ್ಯಕ್ಷ ರಹಮತ್ ಉಲ್ಲಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಕೃಷ್ಣಮೂರ್ತಿ, ಮಂಜುಳಮ್ಮ, ಶೀಲಮ್ಮ ಹಾಗೂ 100ಕ್ಕೂ ಅಧಿಕ ವ್ಯಾಪಾರಸ್ಥರು ಭಾಗವಹಿಸಿದ್ದರು.