SUDDIKSHANA KANNADA NEWS/ DAVANAGERE/ DATE:25-03-2024
ದಾವಣಗೆರೆ: ಕಾಂಗ್ರೆಸ್ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಈಗ ಘೋಷಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬದಲಿಸಿ, ಅಹಿಂದ ವರ್ಗಗಳ ಪ್ರತಿನಿಧಿ ಜಿ.ಬಿ.ವಿನಯ್ ಕುಮಾರ್ಗೆ ಅವಕಾಶ ನೀಡವಂತೆ ಅಹಿದ ಚೇತನ ಸಂಸ್ಥೆಯ ರಾಜ್ಯ ಪ್ರಧಾನ ತಾರ್ಯದರ್ಶಿ ರಾಜು ಬಿ. ಮೌರ್ಯ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ದಕ್ಷಿಣ, ಉತ್ತರ, ಹರಿಹರ, ಹೊನ್ನಾಳಿ, ಚನ್ನಗಿರಿ, ಮಾಯಕೊಂಡ, ಜಗಳೂರು ಮತ್ತು ಹರಪನಹಳ್ಳಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ-ಹಿಂದುಳಿದ-ದಲಿತ ವರ್ಗಗಳು ಸರಾಸರಿ ಶೇಕಡಾ 80 ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಮಾಯಕೊಂಡ ಪರಿಶಿಷ್ಟ ಜಾತಿ, ಜಗಳೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ 6 ವಿಧಾನಸಭಾ ಕ್ಷೇತ್ರಗಳಲ್ಲಿ “ಅಹಿಂದ ವರ್ಗಗಳನ್ನು ಪ್ರತಿನಿಧಿಸುವ ಒಬ್ಬ ಶಾಸಕರಿಲ್ಲ ಎಂದರು.
ಶೇಕಡ 80 ರಷ್ಟಿರುವ ಅಹಿಂದ ವರ್ಗಗಳು ಶಾಮಿಯಾನ ಹಾಕಲು, ಕರಪತ್ರಗಳನ್ನು ಹಂಚಲು, ಪೋಸ್ಟರ್ಗಳನ್ನು ಹಚ್ಚಲು, ಚುನಾವಣಾ ಪ್ರಚಾರದಲ್ಲಿ ಜೈಕಾರ ಹಾಕಲು, ಓಟುಗಳನ್ನು ಹಾಕಲು ಮಾತ್ರವೇ ಸೀಮಿತವನ್ನಾಗಿಸಿರುವ ಈ ವರ್ಗಗಳ ಒಬ್ಬ ವ್ಯಕ್ತಿ “ಸಂಸದನಾಗಲು ಯೋಗ್ಯತೆಯಿಲ್ಲವೇ?” ಎಂಬ ಪ್ರಶ್ನೆಗಳು ಅಹಿಂದ ವರ್ಗಗಳ ಮನಸ್ಸಿನಲ್ಲಿ ಹುಟ್ಟುತ್ತಿವೆ. ದಶಕಗಳ ಕಾಲದಿಂದಲೂ ಓಟುಗಳಾಗಿಯೇ ಬಳಕೆಯಾಗುತ್ತಿರುವ ಶೋಷಿತರಿಗೆ “ಸ್ವಾಭಿಮಾನವೂ ಇದೆ, ಸ್ವಾವಲಂಬನೆಯ ಮತಗಳು ಇವೆ”ಇದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು ಎಂದರು.
ಅಲ್ಪಸಂಖ್ಯಾತ-ಹಿಂದುಳಿದ-ದಲಿತ ವರ್ಗಗಳ ಸ್ವಾಭಿಮಾನಕ್ಕಾಗಿ ನಮ್ಮ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಉಸ್ತುವಾರಿಗಳು, ದಾವಣಗೆರೆ ಲೋಕಸಭಾ ಕ್ಷೇತ್ರದ ಘೋಷಿತ ಕಾಂಗ್ರೆಸ್ ಪಕ್ಷದ
ಅಭ್ಯರ್ಥಿಯನ್ನು ಬದಲಿಸಿ, ಅಹಿಂದ ವರ್ಗಗಳನ್ನು ಪ್ರತಿನಿಧಿಸುವ ಜಿ. ಬಿ. ವಿನಯ್ಕುಮಾರ್ರವರಿಗೆ ಟಿಕೆಟ್ ಘೋಷಣೆ ಮಾಡಿ, “ಬಿ ಫಾರಂ” ನೀಡಿ, ಅತ್ಯಧಿಕ ಮತಗಳಿಂದ ಗೆಲ್ಲಿಸಿ, ಶೋಷಿತ ವರ್ಗಗಳಿಗೂ ನ್ಯಾಯ ದೊರಕಿಸಿಕೊಡಬೇಕೆಂದು
ಮನವಿ ಮಾಡಿದರು.
1991ರ ನಂತರ ಅಹಿಂದ ವರ್ಗಗಳ ಯಾವೊಬ್ಬರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿಲ್ಲ ಎಂದರು. 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಹಿಂದ ವರ್ಗಗಳಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡುತ್ತೆ ಎಂಬ ನಂಬಿಕೆಯಿಂದ ಇದ್ದವರಿಗೆ ನಿರಾಶೆಯಾಗಿದೆ. ತಾಲ್ಲೂಕಿನ ಕಕ್ಕರಗೊಳ್ಳದ ಜಿ.ಬಿ. ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ, ಪಾದಯಾತ್ರೆ, ಸಂವಾದಗಳ ಮೂಲಕ ಜನಸಾಮಾನ್ಯರನ್ನು ಮುಖ್ಯವಾಗಿ ಯುವಕರನ್ನು ಹೆಚ್ಚು ಹೆಚ್ಚು ತಲುಪಿದ್ದರು. ಅವರಿಗೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ, ಕೆ.ಪಿ.ಸಿ.ಸಿ. ಅಧ್ಯಕ್ಷರು, ಟಿಕೆಟ್ ನೀಡಬೇಕಿತ್ತು. ಆದರೆ ಅವರನ್ನು ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಚೇತನದ ಪದಾಧಿಕಾರಿಗಳಾದ ಎಸ್.ಎಂ.ಸಿದ್ದಲಿಂಗಪ್ಪ, ಹನುಮಂತಪ್ಪ ತುಪ್ಪದಹಳ್ಳಿ, ವಿ. ಲಕ್ಷ್ಮಣ್, ಎಸ್. ಮುರುಗೇಶ್, ಹಸನ್ ಬಾಬು, ಜಿ.ಷಣ್ಮುಖಪ್ಪ, ರಂಗನಾಥ್, ಡಿ.ಮಲ್ಲೇಶ್ ಇತರರು ಇದ್ದರು.