SUDDIKSHANA KANNADA NEWS/ DAVANAGERE/ DATE:13-01-2024
ದಾವಣಗೆರೆ: ರಸ್ತೆ ಸುರಕ್ಷಾ ಸಪ್ತಾಹ 2024 ರ ಅಂಗವಾಗಿ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಲ್ಲಿ ನಗರದ ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಹಾಗೂ ರಸ್ತೆ ಸುರಕ್ಷತೆ ಕಾರ್ಯ ನಿರ್ವಹಣೆಯ ಬಗ್ಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ವೀರೇಶ್ ಕುಮಾರ್ ಹಾಗೂ ಉಪ ವ್ಯವಸ್ಥಾಪಕಿ ಮಮತಾ ಅವರು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ, ಅತ್ಯಾಧುನಿಕ ಕ್ಯಾಮೆರಾಗಳ ಅಳವಡಿಸಲಾಗಿದೆ. ನಗರದ 23 ವೃತ್ತಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ.
ವಾಹನ ದಟ್ಟಣೆಗೆ ತಕ್ಕಂತೆ ಸಿಗ್ನಲ್ ಗಳಲ್ಲಿ ಸಮಯ ನಿಗದಿ ಮಾಡಲಾಗಿದೆ. ಇದರ ಪರಿಣಾಮವಾಗಿ ಸಮಯ ಮತ್ತು ಇಂಧನದ ಉಳಿತಾಯವಾಗುತ್ತಿದೆ. ದಾವಣಗೆರೆಯ ಹಳೇ ಪಿಬಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಈರುಳ್ಳಿ ಮಾರುಕಟ್ಟೆ ವರೆಗೆ 7 ಪ್ರಮುಖ ವೃತ್ತಗಳನ್ನು ದಾಟಿ ಹೋಗಲು ಈ ಮೊದಲು 14.46 ನಿಮಿಷ ಬೇಕಿತ್ತು. ಈಗ ಕೇವಲ 8.6 ನಿಮಿಷಗಳಲ್ಲಿ ಆ ಅಂತರವನ್ನು ಕ್ರಮಿಸಬಹುದು.
ಸಿಟಿ ಸರ್ವೆಲನ್ಸ್ ಅಡಿಯಲ್ಲಿ ನಗರದ 111 ಕಡೆಗಳಲ್ಲಿ 215 ಕ್ಯಾಮೆರಾ ಅಳವಡಿಸಲಾಗಿದೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿಯಲ್ಲಿ 11 ಕಡೆಗಳಲ್ಲಿ 45 ಕ್ಯಾಮೆರಾ ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ಹಲವು ಪೊಲೀಸ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗಿದೆ.
ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 140 ಪ್ರಕರಣಗಳ ಪೈಕಿ 123 ಕೇಸ್ ಬಗೆಹರಿದಿವೆ. ಸ್ಮಾರ್ಟ್ ಸಿಟಿ ಐಸಿಟಿ ಪ್ರಾಜೆಕ್ಟ್ ನಿಂದ ದಾವಣಗೆರೆ ನಗರದಲ್ಲಿ ಅಪರಾಧ ಪ್ರಕರಣಗಳ ಪತ್ತೆಕಾರ್ಯದಲ್ಲಿ ತುಂಬಾ ಪರಿಣಾಮ ಬೀರಿದೆ. ಒಟ್ಟು 123 ಪ್ರಕರಣಗಳ ಪೈಕಿ 250 ಗ್ರಾಂ ಚಿನ್ನ, 48 ಕೆಜಿ ಬೆಳ್ಳಿ, 72 ಬೈಕ್ ವಶಪಡಿಸಿಕೊಳ್ಳಲಾಗಿದೆ 1 ಕೊಲೆ ಪ್ರಕರಣ, 22 ಅಪಘಾತ ಪ್ರಕರಣ, ನಕಲಿ ನಂಬರ್ ಪ್ಲೇಟ್ 7 ಕೇಸ್ ಪತ್ತೆಯಲ್ಲಿ ಸಹಾಯಕವಾಗಿದೆ.
ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಇಲಾಖೆಗೆ ನೇರವಾಗಿ ದೂರು ಸಲ್ಲಿಸಲು ಮೊಬೈಲ್ ಸಂಖ್ಯೆ: 9480803208 ವ್ಯವಸ್ಥೆ ಮಾಡಲಾಗಿದೆ. ಈ ಮೊಬೈಲ್ ನಂಬರ್ ಗೆ ಸಾರ್ವಜನಿಕರು ಕಣ್ಣಿಗೆ ಬೀಳುವ/ಗಮನಕ್ಕೆ ಬರುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸದರಿ ನಂಬರಿಗೆ ವಾಟ್ಸಪ್ ಮೂಲಕ ತಿಳಿಸಬಹುದಾಗಿದೆ.
ಇ-ಚಲನ್ ವ್ಯವಸ್ಥೆ ಜಾರಿ
ದಾವಣಗೆರೆ ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ಪಾವತಿಸಲು ಇ-ಚಲನ್ ವ್ಯವಸ್ಥೆ ಜಾರಿಗೆ ತರಲಾಗಿರುತ್ತದೆ.
ಸುರಕ್ಷಾ ಆ್ಯಪ್
ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಇತ್ತೀಚಿಗೆ ದಾವಣಗೆರೆ ‘ಸುರಕ್ಷಾ’ ಆಪ್ ಬಿಡುಗಡೆ ಮಾಡಲಾಗಿದೆ. ಈ ಆಪ್ ಮೂಲಕ ಹೆಣ್ಣುಮಕ್ಕಳು ತುರ್ತು ಪರಿಸ್ಥಿತಿಯಲ್ಲಿ ಈ ಆಪ್ ಮೂಲಕ ತುರ್ತು ನೆರವು ಪಡೆಯಬಹುದಾಗಿರುತ್ತದೆ. ಹಾಗೇಯೆ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಮ್, ವೇರಿಯೆಬಲ್
ಮೆಸೇಜ್ ಸೈನ್ ಬೋರ್ಡ್ಸ್ ಗಳನ್ನು ಅಳವಡಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ದಾವಣಗೆರೆ ನಗರದ ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಈಗಾಗಲೇ ಆಧುನಿಕ ತಂತ್ರ ಜ್ಞಾನಗಳನ್ನು ಬಳಸಿಕೊಳ್ಳಲಾಗಿರುತ್ತದೆ. ಎಲ್ಲರೂ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪ್ರೊಬೇಷನರಿ ಡಿವೈಎಸ್ಪಿ ಯಶವಂತ್, ಪೊಲೀಸ್ ನಿರೀಕ್ಷಕ ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್ ಹಾಗೂ ಪಿಎಸ್ಐ ಶೈಲಜಾ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.