SUDDIKSHANA KANNADA NEWS/ DAVANAGERE/ DATE:15-04-2025
ದಾವಣಗೆರೆ: ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಚನ್ನಗಿರಿಯಲ್ಲಂತೂ ಹೆಚ್ಚಾಗಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಹೆಚ್ಚಿನ ವಹಿವಾಟು ನಡೆಯುತ್ತದೆ. ಈ ವರ್ಷದಲ್ಲೇ ಅತ್ಯಧಿಕ ಧಾರಣೆ ದಾಖಲಿಸಿದೆ. ವರ್ಷದ ಆರಂಭದಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದ್ದ ಅಡಿಕೆ ಧಾರಣೆ ಏಪ್ರಿಲ್ ತಿಂಗಳಿನಲ್ಲಿ ಗಗನಮುಖಿಯಾಗಿದ್ದು, ರೈತರ ಸಂತಸಕ್ಕೂ ಕಾರಣವಾಗಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿದೆ. ಅಡಿಕೆ ಧಾರಣೆ ಹೆಚ್ಚಾಗುತ್ತಿದ್ದಂತೆ ಅಡಿಕೆ ಬೆಳೆಗಾರರು ಮಾರುಕಟ್ಟೆಗೆ ಅಡಿಕೆ ಬಿಡಲು ಆಗಮಿಸುತ್ತಿದ್ದಾರೆ. ಕಳೆದ 12 ದಿನಗಳಿಂದಲೂ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಸ್ವಲ್ಪ ದಿನಗಳು ಹೀಗೆ ಮುಂದುವರಿದರೆ ಪ್ರತಿ ಕ್ವಿಂಟಲ್ ಅಡಿಕೆಗೆ 60 ಸಾವಿರ ಆದರೂ ಅಚ್ಚರಿ ಏನಿಲ್ಲ. ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿರುವುದು ಅಡಿಕೆ ಬೆಳೆಗಾರರ ಖುಷಿಗೆ ಕಾರಣವಾಗಿದ್ದರೆ, ಮತ್ತೆ ಕೆಲ ಅಡಿಕೆ ದಾಸ್ತಾನು ಮಾಡಿದವರು ಇನ್ನೂ ಧಾರಣೆ ಹೆಚ್ಚಾಗುವ ವಿಶ್ವಾಸದಲ್ಲಿದ್ದಾರೆ.
ಜನವರಿ ತಿಂಗಳ ಆರಂಭದಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿತ್ತು. ತಿಂಗಳ ಕೊನೆಯಲ್ಲಿ 52 ಸಾವಿರ ರೂಪಾಯಿ ಸನಿಹದಲ್ಲಿ ಅಡಿಕೆ ಧಾರಣೆ ಇತ್ತು. ಮಾರ್ಚ್ ತಿಂಗಳಲ್ಲಿಯೂ ಹೇಳಿಕೊಳ್ಳುವಂಥ ಧಾರಣೆ ಸಿಕ್ಕಿರಲಿಲ್ಲ. ಏಪ್ರಿಲ್ ನಲ್ಲಿ 57 ಸಾವಿರ ರೂಪಾಯಿ ಸಮೀಪದಲ್ಲಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವರ್ತಕರು.
ಮಧ್ಯಮ ವರ್ಗದ ಅಡಿಕೆ ಬೆಳೆಗಾರರು ಬಂದಷ್ಟು ಲಾಭ ಬರಲಿ ಎಂದುಕೊಂಡು ಅಡಿಕೆಯನ್ನು ಮಾರುಕಟ್ಟೆಗೆ ತರುತ್ತಿದ್ದರೆ ಮತ್ತೆ ಕೆಲವರು 60 ಸಾವಿರ ರೂಪಾಯಿ ದಾಟಿದ ಬಳಿಕ ಮಾರುಕಟ್ಟೆಗೆ ಅಡಿಕೆ ತರಲು ಚಿಂತಿಸುತ್ತಿದ್ದಾರೆ. ಏಪ್ರಿಲ್ 14ರಂದು ನಡೆದ ವಹಿವಾಟಿನಲ್ಲಿ ಈ ವರ್ಷ ಅತಿ ಹೆಚ್ಚು ಅಂದರೆ 56,900 ರೂಪಾಯಿ ಪ್ರತಿ ಕ್ವಿಂಟಲ್ ಗೆ ದಾಖಲಿಸುವ ಮೂಲಕ 57 ಸಾವಿರ ರೂಪಾಯಿಯ ಹತ್ತಿರದಲ್ಲಿದೆ. ದಿನದಿಂದ ದಿನಕ್ಕೆ ಅಡಿಕೆ ಧಾರಣೆ ಜಾಸ್ತಿಯಾಗುತ್ತಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಪ್ರತಿ ಕ್ವಿಂಟಲ್ ಗೆ ಗರಿಷ್ಟ ಎಂದರೆ 56,900 ಆಗಿದ್ದರೆ, ಕನಿಷ್ಠ 54,099 ರೂಪಾಯಿ ಆಗಿದೆ. ಸರಾಸರಿ 55, 656 ರೂಪಾಯಿ ದಾಖಲಿಸಿದೆ.
ಪ್ರತಿ ಕ್ವಿಂಟಲ್ ಬೆಟ್ಟೆ ಅಡಿಕೆಗೆ ಗರಿಷ್ಠ ಬೆಲೆ 27,000 ರೂಪಾಯಿ, ಕನಿಷ್ಠ ಬೆಲೆ 21,786 ರೂಪಾಯಿ, ಸರಾಸರಿ ಬೆಲೆ 25,162 ರೂಪಾಯಿಯಷ್ಟು ವಹಿವಾಟು ಮುಗಿಸಿದೆ.