SUDDIKSHANA KANNADA NEWS/ DAVANAGERE/ DATE:10-03-2025
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂವಿಧಾನದ ಅನುಚ್ಚೇದ 371 (ಜೆ) ಅಡಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಕಲ್ಪಿಸಿರುವ ಮೀಸಲಾತಿ ನಿಯಮಗಳ ಸಮರ್ಪಕ ಜಾರಿ ಮತ್ತು ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಈ ವಿಷಯದಲ್ಲಿ ಅನಾದರ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರಗತಿ ಪರಿಶೀಲನಾ ಸಭೆಗಳಿಗೆ ಇಲಾಖಾ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳಿಗಿಂತ ಮೇಲ್ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಖುದ್ದಾಗಿ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು 371 (ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಸಚಿವ ಸಂಪುಟ ಉಪಸಮಿತಿಯ ವರದಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿಯಲ್ಲಿ ತಾರತಮ್ಯ ಹೋಗಲಾಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಂವಿಧಾನದ 371 (ಜೆ) ಅನುಚ್ಚೇದಕ್ಕೆ ತಿದ್ದುಪಡಿ ತಂದು ಕಲ್ಪಿಸಲಾಗಿರುವ ಸಂವಿಧಾನಾತ್ಮಕ ಹಕ್ಕು ಮತ್ತು ಸೌಕರ್ಯಗಳ ಜಾರಿಗೆ ಅಧಿಕಾರಿಗಳು ಅನಾಸಕ್ತಿ ತೋರುತ್ತಿರುವುದನ್ನು ಗಮನಿಸಲಾಗುತ್ತಿದೆ. ಅನೇಕ ಬಾರಿ ನೆನಪೋಲೆ, ಸುತ್ತೋಲೆ ಕಳುಹಿಸಿದರೂ ಕೆಲ ಇಲಾಖೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ನಿರ್ಲಕ್ಷಿಸುತ್ತಿರುವುದನ್ನು ಸಚಿವ ಸಂಪುಟ ಉಪಸಮಿತಿ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆಗಳನ್ನು ಆಯ್ದ ಇಲಾಖೆಗಳೊಂದಿಗೆ ನಡೆಸಲಾಗುವುದು. ಸಭೆಗೆ ಕಡ್ಡಾಯವಾಗಿ ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರ ಹಂತದ ಅಧಿಕಾರಿಗಳು ಭಾಗವಹಿಸಬೇಕು ಎಂದರು.
ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಪೊಲೀಸ್ ಮತ್ತು ಇತರೆ ಇಲಾಖೆಗಳು ಕೂಡಲೇ ನೇಮಕಾತಿ ಆದೇಶಗಳನ್ನು ಅಭ್ಯರ್ಥಿಗಳಿಗೆ ನೀಡಿ ಸೇವೆಗೆ ಹಾಜರುಪಡಿಸಿಕೊಳ್ಳಬೇಕು. ಸ್ಥಳೀಯ ಮತ್ತು ಉಳಿಕೆ ಮಾತೃವೃಂದದ ಸಂಯುಕ್ತ ಜೇಷ್ಠತಾ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಹೊರಡಿಸಬೇಕು. ಈ ವಿಷಯದಲ್ಲಿ ನ್ಯಾಯಲಯದ ಆದೇಶ ಸ್ಪಷ್ಟವಾಗಿದೆ. ಮಾಸಾಂತ್ಯದೊಳಗೆ ಆದೇಶ ಹೊರಡಿಸಿ ಗೊಂದಲ ನಿವಾರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಸೇರಿದಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.