SUDDIKSHANA KANNADA NEWS/ DAVANAGERE/ DATE:05-04-2025
ದಾವಣಗೆರೆ (Davanagere): ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಗೆರೆ ಗ್ರಾಮದ ಬಳಿ ಬೀರೂರು – ಸಮ್ಮಗಿ ರಾಜ್ಯ ಹೆದ್ದಾರಿ-76ರಲ್ಲಿ ಗಣೇಶ ಖಾಸಗಿ ಬಸ್ ಮತ್ತು ಮಾರುತಿ ಇಕೋ ವಾಹನಗಳ ಮಧ್ಯೆ ಅಪಘಾತವಾಗಿದ್ದು, ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮಾರುತಿ ಇಕೋ ವಾಹನದಲ್ಲಿದ್ದ ಬಸವರಾಜಪ್ಪ (38), ವಿಜಯ್ ಕುಮಾರ್ (35) ಹಾಗೂ ಶ್ರೀಧರ್ (32) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತಪಟ್ಟ ಮೂವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪ ಗ್ರಾಮದವರು.
ದಾವಣಗೆರೆ ಕಡೆಯಿಂದ ಸಂತೇಬೆನ್ನೂರು ಕಡೆ ಹೋಗುತ್ತಿದ್ದ ಮಾರುತಿ ಇಕೋ ವಾಹನ ನಂ ಕೆಎ-23, ಪಿ-3173 ಹಾಗೂ ಸಂತೇಬೆನ್ನೂರು ಕಡೆಯಿಂದ ದಾವಣಗೆರೆ ಕಡೆ ಬರುತ್ತಿದ್ದ ಗಣೇಶ ಖಾಸಗಿ ಬಸ್ ನಂಬರ್ ಜಿ.ಎ 07 ನಂಬರ್ ನ ವಾಹನಗಳ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಆಗಿದೆ.
ಮೃತ ದೇಹಗಳನ್ನು ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಹೆದ್ದಾರಿ-76 ರಸ್ತೆಯು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಿಂದ ಹಾವೇರಿ ಜಿಲ್ಲೆಯ ಸಮ್ಮಸಗಿ ಯವರೆಗೆ ಇದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ ಹಾಗೂ ಹರಿಹರ ತಾಲ್ಲೂಕುಗಳಲ್ಲಿ ಹಾದು ಹೋಗುತ್ತದೆ. ಈ ಹೆದ್ದಾರಿ ಎರಡು ಪಥದ ವಿಸ್ತಾರವಾದ ರಸ್ತೆಯಾಗಿದ್ದು, ವಾಹನಗಳು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.