SUDDIKSHANA KANNADA NEWS/ DAVANAGERE/ DATE:31-01-2025
ದಾವಣಗೆರೆ: ಆರನೇ ಮೈಲುಕಲ್ಲು ಗ್ರಾಮದ ಬಳಿ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡ ಘಟನೆ ನಡೆದಿದೆ.
ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಹೆಚ್. ರಮೇಶ್ (55) ಹಾಗೂ ರಾಜಪ್ಪ ತೇಜಪ್ಪ (45) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ ಮನೆಗೆ ನುಗ್ಗಿದ್ದರಿಂದ ಬುನಾದಿ ಸಮೇತ ಅದುರಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚನ್ನಗಿರಿ ಕಡೆಗೆ ಭದ್ರಾವತಿ – ದಾವಣಗೆರೆ ನಡುವೆ ಸಂಚರಿಸುತ್ತಿದ್ದ ಎಸ್ ಎಂ ಎಲ್ ಎಸ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿ ಕೊನೆಯುಸಿರು ಎಳೆದರೆ, ರಸ್ತೆ ಬಲಭಾಗದ ಕಡೆಗೆ ಇದ್ದ ಮನೆಯೊಂದಕ್ಕೆ ನುಗ್ಗಿದ್ದು, ಮನೆ ಮಾಳಿಗೆ ಕುಸಿದಿದೆ. ಬಸ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೈಕ್ ತಪ್ಪಿಸಲು ಚಾಲಕನು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೈಕ್ ಗೆ ಡಿಕ್ಕಿ ಹೊಡೆದು ಮನೆಗೆ ಬಸ್ ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿದ್ದವರು ಕೂಗುತ್ತಲೇ ಹೊರಗೆ ಬಂದಿದ್ದಾರೆ. ಗಾಯಾಳುಗಳನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.