SUDDIKSHANA KANNADA NEWS/ DAVANAGERE/ DATE:29-10-2024
ದಾವಣಗೆರೆ: ವಕ್ಫ್ ಬೋರ್ಡ್ ಒಂದು ಕಪ್ಪು ಚುಕ್ಕೆಯಾಗಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಗೆ ಜಮೀನು ನೀಡಿರುವುದು ಸರಿಯಲ್ಲ. ಕೂಡಲೇ ಕಾಂಗ್ರೆಸ್ ನೇತೃತ್ವದ ಸರ್ಕಾರವು ವಕ್ಫ್ ಬೋರ್ಡ್ ಗೆ ನೀಡಿರುವ ರೈತರ ಜಮೀನು ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ನ್ಯಾಮತಿ ತಾಲೂಕಿನ ಸುಂಕದಕಟ್ಟೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನು ತಿದ್ದುಪಡಿ ಮಾಡಿ ವಕ್ಫ್ ಬೋರ್ಡ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಜನರು, ನಗರ ಜನರು ಬೆಂಬಲಿಸಿ ಈ ಬೋರ್ಡ್ ರದ್ದು ಮಾಡಲು ಪತ್ರ ಚಳವಳಿ ಮಾಡಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದರು.
ವಕ್ಫ್ ಬೋರ್ಡ್ ಗೆ ಸುಂಕದಕಟ್ಟೆ ಗ್ರಾಮದಲ್ಲಿ ನೀಡಿರುವ ಜಮೀನು ವಾಪಸ್ ಪಡೆಯಬೇಕು. ಅದೇ ರೀತಿಯಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಸಾಸ್ವೆಹಳ್ಳಿಯಲ್ಲಿ ಮಸೀದಿಗಳು, ವಕ್ಫ್ ಬೋರ್ಡ್ ಗೆ ನೀಡಿರುವ ಜಮೀನು, ಜಾಗ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. 2022ರಲ್ಲಿ ಹದ್ದುಬಸ್ತು ಮಾಡಲು ಅಧಿಕಾರಿಗಳು ಬಂದರು. ಆಗ ಬಿಡಲಿಲ್ಲ. ಪವಿತ್ರವಾದ ನರಸಿಂಹ ಸ್ವಾಮಿ, ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಜಾಗ ನೀಡುವಂತೆ ಕೇಳಿದ್ದರೂ ನೀಡಲಿಲ್ಲ. ವಕ್ಫ್ ಬೋರ್ಡ್ ಗೆ ನೀಡಲು ಮುಂದಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.