SUDDIKSHANA KANNADA NEWS/ DAVANAGERE/ DATE:02-03-2025
ದಾವಣಗೆರೆ: ದಾಖಲೆಯ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯರು ಈ ಬಾರಿಯ ಆಯವ್ಯಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಶ್ರೇಯೋಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಜವಾಹರ ಬಾಲ್ ಮಂಚ್ ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಅನುಕೂಲಕರ ವಾತಾವರಣ ಸೃಷ್ಟಿಸಿ, ಹೆಚ್ಚಿನ ಮಕ್ಕಳು ಶಾಲೆಗೆ ಬರುವಂತೆ ಮಾಡುವಂಥ ಕಾರ್ಯಕ್ರಮಗಳನ್ನು ರೂಪಿಸಬೇಕು. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ಮಾರಕ ಕಾಯಿಲೆಗಳಿಗೆ ಮಕ್ಕಳು ತುತ್ತಾಗುತ್ತಿದ್ದು, ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಹೆಚ್ಚಾಗಿ ನಡೆಸುವಂತಾಗಬೇಕು. ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯಪುಸ್ತಕಗಳು ಮತ್ತು ಶೂ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಸಿದ್ಧರಾಮೋತ್ಸವದ ಮೂಲಕ ಸಿದ್ದರಾಮಯ್ಯರಿಗೆ ರಾಜಕೀಯದಲ್ಲಿ ಮತ್ತಷ್ಟು ಉತ್ತುಂಗಕ್ಕೇರುವಂತೆ ಮಾಡಿದ ಮಧ್ಯಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಬೇಕು. ಇದು ನೆನಪಿನಲ್ಲಿ ಉಳಿಯುವಂತಿರಬೇಕು. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ, ವಿದ್ಯಾರ್ಥಿಗಳು, ರೈತರು, ಮಧ್ಯಮವರ್ಗದವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು. ಕನ್ನಡಿಗರ ಮೇಲೆ ಮರಾಠಿಗರು ದೌರ್ಜನ್ಯ ಎಸಗುತ್ತಿದ್ದು, ಶಿಕ್ಷಿಸುವ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಬೇಕು ಎಂದು ಮೊಹಮ್ಮದ್ ಜಿಕ್ರಿಯಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.