SUDDIKSHANA KANNADA NEWS/ DAVANAGERE/ DATE:05-04-2025
ಬೆಂಗಳೂರು: ಯಾವುದೇ ಕ್ಷೇತ್ರ ನೋಡಿದರೂ ನಮ್ಮ ಸಮಾಜದವರು ಮತ್ತು ಶೋಷಿತರನ್ನು ತುಳಿಯುವ, ಹತ್ತಿಕ್ಕುವ ಸಂಚು ನಡೆಯುತ್ತಲೇ ಇದೆ. ಅದರ ವಿರುದ್ಧ ಹೋರಾಟ ಮಾಡದೇ ಗುಲಾಮರಾಗಿ ಇದ್ದೇವೆ. ದಾವಣಗೆರೆ ಸುತ್ತಮುತ್ತ ಜಿಲ್ಲೆಗಳ ದೊಡ್ಡ ನಾಯಕರಿಗೆ ನಮ್ಮ ಸಮಾಜದ ಮುಖಂಡರು ಹೆದರಿ ಜೀವನ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರೂ ಆದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಚಂದ್ರಾ ಲೇಔಟ್ ನ ಕನಕ ಭವನದಲ್ಲಿ ಅಹಲ್ಯಾಬಾಯಿ ಮಹಿಳಾ ಮತ್ತು ಮಕ್ಕಳ ಸಂಘ, ಬೆಂಗಳೂರು ಹಾಲುಮತ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಕುರುಬ (ಹಾಲುಮತ) ಜಯಂತಿ, ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಜಯಂತಿ, 300ನೇ ವರ್ಷದ ಅಹಲ್ಯಾಬಾಯಿ ಹೋಳಕರ ಜಯಂತ್ಯೋತ್ಸವ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ 75ರಿಂದ 80 ಲಕ್ಷ ಜನಸಂಖ್ಯೆ ಇರುವ ಹಾಲುಮತ ಸಮಾಜಕ್ಕೆ ಕನಿಷ್ಠ ಎಂದರೂ 30ರಿಂದ 35 ಶಾಸಕರು ವಿಧಾನಸೌಧದಲ್ಲಿ ಇರಬೇಕು. ಈಗ ಕೇವಲ 11 ಶಾಸಕರು ಮಾತ್ರ ಇದ್ದಾರೆ. ಐದಾರು ಶಾಸಕರ ಹೆಸರು ಮಾತ್ರ ಹೇಳಬಹುದು. ಇನ್ನುಳಿದವರ ಹೆಸರೇ ಗೊತ್ತಿರುವುದಿಲ್ಲ. ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಸಮಾಜ ನಮ್ಮದು. 2 ಲಕ್ಷಕ್ಕೆ ಒಬ್ಬರಂತೆ ಆದರೂ 35 ಶಾಸಕರು ಇರಬೇಕಾಗುತ್ತದೆ. ಯಾವುದೇ ಕ್ಷೇತ್ರ ನೋಡಿದರೂ ನಮ್ಮನ್ನು ತುಳಿಯುವ ಯತ್ನ ನಡೆಯುತ್ತಲೇ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವು ಸ್ವಾಭಿಮಾನಿಗಳಾಗಿ ಬದುಕೋಣ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಬುದ್ಧಿವಂತಿಕೆ, ಸಾಮರ್ಥ್ಯ ನಮ್ಮಲ್ಲಿಯೂ ಇದೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ ಪ್ರಯತ್ನ ಮಾಡೋಣ. ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಯುವಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಸಮಾಜದ ಮತಗಳು ಎರಡೂವರೆಯಿಂದ ಎರಡು ಮುಕ್ಕಾಲು ಲಕ್ಷ ಮತಗಳು ಇವೆ. ನನಗೆ ಬಂದದ್ದು ಕೇವಲ 43 ಸಾವಿರ ಮತಗಳು. ಸಮಾಜ ಕೈಹಿಡಿದಿದ್ದರೆ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳು
ಬರುತ್ತಿದ್ದವು. ಆಗ ದೊಡ್ಡ ಬದಲಾವಣೆ ಆಗುತಿತ್ತು. ಅಲ್ಲಿನ ನಾಯಕರು, ಜನರ ಎದುರಿಸುತ್ತಿರುವ ಸವಾಲುಗಳು, ಸಂಕಷ್ಟಗಳು ನನಗೆ ಅರ್ಥ ಆಗಿದೆ. ಮುಂದಿನ ದಿನಗಳಲ್ಲಿ ಹೋರಾಟ ನಿಲ್ಲಿಸುವುದಿಲ್ಲ. ಇದು ಮುಂದುವರಿಯುತ್ತದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಕಣಕ್ಕಿಳಿದು ಪ್ರಯತ್ನ ಮಾಡಿದ್ದೆ. ಇಂಡಿಪೆಂಡೆಂಟ್ ಆಗಿ ಸ್ಪರ್ಧೆ ಮಾಡುವ ಅನಿವಾರ್ಯತೆ ಆಗ ಸೃಷ್ಟಿಯಾಗಿತ್ತು. ನಾನು ತಪ್ಪು ಮಾಡಿದೆ ಎಂದು ಹೇಳುವುದು ಶಾಸಕರು, ಸಚಿವರು ಸೇರಿದಂತೆ ದೊಡ್ಡ ನಾಯಕರೆನಿಸಿಕೊಂಡವರೇ ಹೊರತು ಸಾಮಾನ್ಯ ಜನರು ಅಲ್ಲ. ಜನರು ನಾನು ತೆಗೆದುಕೊಂಡ ನಿರ್ಧಾರ ಮತ್ತು ಮಾಡಿದ್ದು ಸರಿ ಎನ್ನುತ್ತಾರೆ. ನಾನು ಯಾವಾಗಲೂ ಜನರ ಮಾತು ನಂಬುತ್ತೇನೆ. ಲೀಡರ್ ಗಳ ಮಾತನ್ನಲ್ಲ ಎಂದು ತಿಳಿಸಿದರು.
ಕಣದಿಂದ ಹಿಂದೆ ಸರಿದಿದ್ದರೆ ಎಂಎಲ್ ಸಿ ಮಾಡುತ್ತಿದ್ದರು, ಬೋರ್ಡ್ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರು ಎಂದು ನಾಯಕರು ಹೇಳುತ್ತಾರೆ. ನನಗೆ ಖಂಡಿತವಾಗಿಯೂ ಇದರಲ್ಲಿ ನಂಬಿಕೆ ಇಲ್ಲ. ನಾಯಕನಾಗಬೇಕಾದರೆ ಚುನಾವಣೆ ಎದುರಿಸಲೇಬೇಕಾಗುತ್ತದೆ. ಜನರ ಬಳಿಗೆ ಹೋಗಲೇಬೇಕಾಗುತ್ತದೆ. ಸೋಲು ಗೆಲುವು ಮುಖ್ಯವಲ್ಲ. ಸಮಾಜದ ಯುವಕರು, ಯುವತಿಯರು ರಾಜಕಾರಣದಲ್ಲಿ ಆಸಕ್ತಿ ಇದ್ದರೆ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ. ಸಾಮರ್ಥ್ಯ ಮೀರಿ ಚುನಾವಣೆಗೆ ನಿಲ್ಲಿ. ಗ್ರಾಮ ಪಂಚಾಯಿತಿ, ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ. ಜನರು ಮನಸ್ಸು ಮಾಡಿದರೆ, ನೀವು ಪ್ರಯತ್ನಪಟ್ಟರೆ ಭವಿಷ್ಯದಲ್ಲಿ ಅವಕಾಶ ಸಿಗುತ್ತವೆ ಎಂದು ಸಲಹೆ ನೀಡಿದರು.
ಹೊಸದುರ್ಗದ ಶ್ರೀ ಕನಕ ಗುರುಪೀಠದ ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ತಿಂಥಣಿ ಶ್ರೀ ಕನಕ ಗುರುಪೀಠ ಶಾಖಾ ಮಠದ ಪರಮಪೂಜ್ಯ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಎಂ. ರೇವಣ್ಣ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಬೆಂಗಳೂರಿನ
ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ. ಬಿ. ಬಳಗಾವಿ, ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಹಾಲಪ್ಪ ಹೊಂಬಾಳೆ, ಅಹಲ್ಯಾಬಾಯಿ ಮಹಿಳಾ ಮತ್ತು ಮಕ್ಕಳ ಸಂಘದ ಅಧ್ಯಕ್ಷೆ ಸ್ವರೂಪ ರಾಣಿ, ಬಿಜೆಪಿ ಮುಖಂಡ ಅರುಣ್ ಸೋಮಣ್ಣ, ಬೆಂಗಳೂರಿನ ಶಿವಸ್ವಾಮಿ, ಮಾಜಿ ಮಹಾಪೌರರಾದ ಹುಚ್ಚಪ್ಪ ಮತ್ತಿತರರು ಹಾಜರಿದ್ದರು.