ಬೆಂಗಳೂರು: ಕುರುಬ ಸಮುದಾಯಕ್ಕೆ ಏನೇನು ನೀಡಿದ್ದೇನೆಂದು ಸಿಎಂ ಸಿದ್ದರಾಮಯ್ಯ ಸುದೀರ್ಘವಾದ ಉತ್ತರ ಕೊಟ್ಟಿದ್ದಾರೆ. ನಾನು ಕುರುಬ ಸಮುದಾಯಕ್ಕೆ ಏನೇನೂ ಮಾಡಿಲ್ಲ ಎಂಬ ಆರೋಪ ಮಾಡುವವರು ಮೊದಲು ಇತಿಹಾಸ ಅರಿಯಲಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಾರು ಮಾತಾಡಲಿ, ಬಿಡಲಿ ಇದು ಸತ್ಯ. ಇದು ಇತಿಹಾಸ. ಒಟ್ಟಿನಲ್ಲಿ ಸಮಾಜದ ಸಂಘಟನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಎಲ್ಲ ಸಮಾಜಕ್ಕೂ ಮಾಡಿದ್ದೇನೆ
ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಜಾರಿಗೆ ತಂದ ಗ್ಯಾರಂಟಿಗಳು ಎಲ್ಲಾ ಜಾತಿಯ ಬಡವರಿಗಾಗಿ ಜಾರಿ ಆಗಿದೆ. ಸರ್ವರನ್ನೂ ಒಳಗೊಂಡ, ಸರ್ವರ ಅಭಿವೃದ್ಧಿಯ ಸಮಾಜ ನಿರ್ಮಾಣ ನನ್ನ ಗುರಿ ಎಂದರು.
ಅದಕ್ಕೇ ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರೂ ನನ್ನನ್ನು ಪ್ರೀತಿಸ್ತಾರೆ. ಹೀಗಾಗಿ ನಾನು ನಮ್ಮ ಜಾತಿ ಸೇರಿ ಸಮಾಜದ ಎಲ್ಲಾ ಜಾತಿ, ಧರ್ಮದವರ ಆಶೀರ್ವಾದಕ್ಕಾಗಿ ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಜೀವಬೆದರಿಕೆಯಿಂದ ಸಂಘದ ಚುನಾವಣೆವರೆಗೂ: ಸಿ.ಎಂ ಸ್ಮರಣೆ
ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು. ನಾನು ಹೆದರಲಿಲ್ಲ. ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ ಬೆದರಿಕೆ ಇತ್ತು. ಆದರೂ ನಾನು ಹೆದರದೆ ಗ್ರಾಮೀಣ ಭಾಗದ ಸಂಘದ ನಿರ್ದೇಶಕರ ಬೆಂಬಲದಲ್ಲಿ ದಾವಣಗೆರೆಯ ಮಲ್ಲಪ್ಪ ಅವರನ್ನು ರೌಡಿ ಪುಟ್ಟಸ್ವಾಮಿ ವಿರುದ್ಧ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿದೆ. ಪುಟ್ಟಸ್ವಾಮಿ ನ್ಯಾಯಾಲಯಕ್ಕೆ ಹೋದರೂ ತೀರ್ಪು ನಮ್ಮ ಪರವಾಗಿ ಬಂತು. ಹೀಗೆ ಸಂಘವನ್ನು ನಾನು ಉಳಿಸಿದೆ.
ಬಳಿಕ ನನ್ನ ಹಳೇ ಕಾರಲ್ಲಿ ಇಡೀ ರಾಜ್ಯ ಸುತ್ತಿ ಸಮಾಜವನ್ನು ಸಂಘಟಿಸಿದೆ. ತಾರಾಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದ್ದು ನಾನೇ. ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಹೀಗೆ ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಮಾಡಿದ್ದೇನೆ ಎನ್ನುವ ಚರಿತ್ರೆಯನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರುಪೀಠ ನಾನು ಮಾಡಿದ್ದು ಎಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆ ಎಂದರು.








