SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ದಾವಣಗೆರೆ ಜಿಲ್ಲೆಗ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 8,510 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ದಾವಣಗೆರೆ ನಗರದಲ್ಲಿ ಮಹಿಳಾ ಸ್ವಸಹಾಯ ಸಂಘದವರೇ ನಿರ್ವಹಿಸುವ 2 “ಅಕ್ಕ ಕೆಫೆ” ಯಲ್ಲಿ ಒಂದನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ ರೂ. 216 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಿದ್ದು, ಇದರಿಂದ 35 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಇದುವರೆಗೂ 21 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದ್ದು, ರೂ. 117 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜನಸಾಮಾನ್ಯರ ಬದುಕಿಗೆ ಆರ್ಥಿಕ ಸಬಲತೆಯೊಂದಿಗೆ, ಸಾಮಾಜಿಕ ಗೌರವ ತಂದುಕೊಡುವ ದೃಷ್ಟಿಯಿಂದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ನಮ್ಮ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಇದರಿಂದ ರಾಜ್ಯದಲ್ಲಿನ ಜನರ ಜೀವನ ಮಟ್ಟ ಸುಧಾರಿಸಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಬೆಳವಣಿಗೆ ಉತ್ತೇಜಕವಾಗಲು ಸಹಕಾರಿಯಾಗಿವೆ. ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ದೊರೆಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ನುಡಿದಂತೆ ನಡೆದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೂ 5 ಗ್ಯಾರಂಟಿ ಯೋಜನೆಗಳಿಂದ ಒಟ್ಟು ರೂ. 1966 ಕೋಟಿ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ತಲುಪಿಸಲಾಗಿದೆ. ಶಕ್ತಿ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಒಟ್ಟು 6.78 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಪ್ರಯಾಣದ ವೆಚ್ಚವಾಗಿ ಸರ್ಕಾರ ರೂ. 190 ಕೋಟಿಗಳನ್ನು ನೀಡಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಮೂರು ಲಕ್ಷದ ಇಪ್ಪತ್ತೊಂಭತ್ತು ಸಾವಿರ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆ.ಜಿ.
ಅಕ್ಕಿಯೊಂದಿಗೆ ನಗದಾಗಿ ತಲಾ ರೂ. 170/-ರಂತೆ ಒಟ್ಟು ರೂ. 287 ಕೋಟಿಗಳನ್ನು ಡಿ.ಬಿ.ಟಿ. ಮಾಡಲಾಗಿದೆ. ಅಲ್ಲದೇ 45,236 ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 35 ಕೆ.ಜಿ. ಆಹಾರಧಾನ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 4.37 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿದ್ದು, ಒಟ್ಟು ರೂ. 442 ಕೋಟಿ ವೆಚ್ಚ ಭರಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3.61 ಲಕ್ಷ ಕುಟುಂಬದ ಯಜಮಾನಿಯರ
ಖಾತೆಗೆ ನೇರವಾಗಿ ಪ್ರತಿ ತಿಂಗಳು ಎರಡು ಸಾವಿರದಂತೆ ಇಲ್ಲಿಯವರೆಗೆ ರೂ. 1039 ಕೋಟಿ ವರ್ಗಾಯಿಸಲಾಗಿದೆ. ಯುವನಿಧಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವೆರಗೆ 5,689 ಪದವೀಧರರು ಹಾಗೂ 113 ಡಿಪ್ಲೊಮಾ ಪಾಸಾದವರು
ಸೇರಿದಂತೆ ಒಟ್ಟು 5,802 ನಿರುದ್ಯೋಗಿಗಳು ನೊಂದಾಯಿಸಿಕೊಂಡಿದ್ದು, ಇವರುಗಳಿಗೆ ರೂ. 8.47 ಕೋಟಿಗಳನ್ನು ಡಿ.ಬಿ.ಟಿ. ಮೂಲಕ ಪಾವತಿಸಲಾಗಿದೆ ಎಂದು ವಿವರಿಸಿದರು.