SUDDIKSHANA KANNADA NEWS/ DAVANAGERE/ DATE:31-03-2025
ದಾವಣಗೆರೆ: ನ್ಯಾಮತಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 15.30 ಕೋಟಿ ರೂಪಾಯಿ ಮೌ್ಲ್ಯದ 17.1 ಕೆಜಿ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ನ್ಯಾಮತಿ ತಾಲೂಕಿನವರೇ.
ತಮಿಳುನಾಡಿನ ಮೂಲತಃ ಮಧುರೈನ ಸುರಹೊನ್ನೆ ವಾಸಿಯಾದ ತಿಂಡಿ ವ್ಯಾಪಾರಿ ವಿಜಯಕುಮಾರ್ (30), ವಿಜಯ್ ಸಹೋದರ ಅಜಯ ಕುಮಾರ್ (28), ನ್ಯಾಮತಿ ಪಟ್ಟಣದ ಬೆಳಗುತ್ತಿ ಕ್ರಾಸ್ ನ ಶಾಂತಿನಗರ ಶಾಲೆಯ ಎದುರಿನ ವಾಸಿ ಅಭಿಷೇಕ (23), ಸುರಹೊನ್ನೆಯ ಶಾಂತಿನಗರ ವಾಸಿ ತೆಂಗಿನ ವ್ಯಾಪಾರಿ ಚಂದ್ರು (23), ಚಾಲಕ ಮಂಜುನಾಥ್ 32) ಹಾಗೂ ಸಿಹಿ ತಿಂಡಿ ವ್ಯಾಪಿರ ಪರಮಾನಂದ (30) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
2024ರ ಅಕ್ಟೋಬರ್ 28ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್ಬಿಐ ಬ್ಯಾಂಕಿನ ಶಾಖೆಯಲ್ಲಿ ಅಂದಾಜು 13 ಕೋಟಿ ರೂಪಾಯಿ ಮೌಲ್ಯದ 17.7 ಕೆಜಿ ಅಡವಿಟ್ಟ ಚಿನ್ನಾಭರಣಗಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಬ್ಯಾಂಕ್ ಸಿಬ್ಬಂದಿಗಳು ಸುಮಾರು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ಬ್ಯಾಂಕ್ ತೆರೆಯಲು ಬಂದಾಂಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಐಜಿಪಿ ಮತ್ತು ಎಸ್ಪಿ, ಎಎಸ್ಪಿರವರು ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ
ಸ್ಥಳ ಪರಿಶೀಲನೆ ಮಾಡಿದ್ದರು.
ಸ್ಥಳಕ್ಕೆ ಎಫ್ಎಸ್ಎಲ್ ವ್ಯಾನ್, ಸೋಕೊ ಅಧಿಕಾರಿ, ಡಾಗ್ ಸ್ಯ್ಕಾಡ್ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿದ್ದು, ಬ್ಯಾಂಕ್ನ ಬಲಭಾಗದ ಕಬ್ಬಿಣದ ಕಿಟಿಕಿಯ ಗ್ರಿಲ್ ಅನ್ನು ಕಟ್ ಮಾಡಿ ಕಳ್ಳರು ಒಳ ಪ್ರವೇಶಿಸಿದ್ದು ತದನಂತರ
ಸಿಸಿ ಟಿವಿ, ಅಲರಾಮ್ ಮತ್ತು ಎಲ್ಲಾ ವೈರಗಳ ಕನೆಕ್ಷನ್ ತೆಗೆದು ನಂತರ ಸ್ಟ್ರಾಂಗ್ ರೂಂಗೆ ಇದ್ದಂತಹ ಗ್ರಿಲ್ ಡೋರ್ ಬೀಗವನ್ನು ಮುರಿದು ಒಳಗೆ ಬಂದು ಅಲ್ಲಿ ಇದ್ದಂತಹ ನಾಲ್ಕು ಕರೆನ್ಸಿ ಚೆಸ್ಟ್ಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್ನ ಸಹಾಯದಿಂದ ಕೊರೆದು ಲಾಕರ್ ಬಾಗಿಲು ತೆಗೆದು ಅದರಲ್ಲಿ ಸಾರ್ವಜನಿಕರು ಅಡವಿಟ್ಟಿದ್ದ ಚಿನ್ನಾಭರಣಗಳ ಟ್ರೇನಲ್ಲಿ ಇದ್ದಂತಹ ಸುಮಾರು 17.7 ಕೆಜಿ ಆಭರಣಗಳನ್ನು ಕದ್ದಿದ್ದರು.
ಸಾಕ್ಷಿ ನಾಶ ಮಾಡುವ ಸಲುವಾಗಿ ಸ್ಟ್ರಾಂಗ್ ರೂಂ, ಬ್ಯಾಂಕ್ ಮ್ಯಾನೇಜರ್ ರೂಮ್ ಹಾಗೂ ಕಟ್ ಮಾಡಿರುವ ಕಿಟಿಕಿಯವರೆಗೆ ಖಾರದ ಪುಡಿಯನ್ನು ಚಲ್ಲಿ ಹೋಗಿದ್ದರು. ಆ ದಿನ ಹೆಚ್ಚು ಮಳೆ ಬರುತ್ತಿದ್ದು ಬ್ಯಾಂಕ್ ನ ಹಿಂದೆ ಹೆಚ್ಚು ಜಾಲಿ ಗಿಡಗಳು ಬೆಳೆದಿದ್ದು, ಮಳೆ ನೀರು ನಿಂತಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ರೀತಿಯ ಸಾಕ್ಯಗಳನ್ನು ಸಂಗ್ರಹಿಸುವುದು ಕಠಿಣವಾಗಿತ್ತು.
ಪ್ರಕರಣದ ತನಿಖಾಧಿಕಾರಿಯನ್ನಾಗಿ ಚನ್ನಗಿರಿ ಉಪ ವಿಭಾಗದ ಶ್ಯಾಮ್ ವರ್ಗೀಸ್ ಅವರನ್ನು ನೇಮಕ ಮಾಡಲಾಗಿತ್ತು. ತನಿಖೆಯಲ್ಲಿ ಸಹಕರಿಸಲು ಡಿವೈಎಸ್ಪಿ ಗ್ರಾಮಾಂತರ ಉಪವಿಭಾಗ ಬಸವರಾಜ್ ಬಿ. ಎಸ್ ಅವರನ್ನು ಒಳಗೊಂಡಂತೆ ಐದು ತಂಡಗಳನ್ನು ರಚಿಸಲಾಗಿತ್ತು. ಮೊದಲ ದಿನದಿಂದಲ್ಲೇ ಪ್ರತಿ ತಂಡಕ್ಕೂ ಪ್ರತ್ಯೇಕವಾದ ಕೆಲಸಗಳನ್ನು ನಿಯೋಜನೆ ಮಾಡಲಾಗಿತ್ತು ಅವರು ಎಲ್ಲಾ ರೀತಿಯ ತಾಂತ್ರಿಕ ಮತ್ತು ಭೌತಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದರ ಜೊತೆಗೆ ಸುಮಾರು 6ರಿಂದ 8 ಕಿಲೋ ಮೀ ವರೆಗೆ ಬ್ಯಾಂಕ್ನ ಸುತ್ತಲು ಕೂಲಂಕುಷವಾಗಿ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಉಪಯುಕ್ತ ಮಾಹಿತಿಗಳು ಲಭ್ಯವಾಗಿರಲಿಲ್ಲ ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.