SUDDIKSHANA KANNADA NEWS/ DAVANAGERE/ DATE:05-03-2025
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಅಲ್ಪಸಂಖ್ಯಾತರು ಎಂದರೆ ಮುಸ್ಲಿಂಮರು ಮಾತ್ರ ಕಾಣುತ್ತಾರೆ ಹೊರತೂ ಇತರ ನೈಜ ಅಲ್ಪಸಂಖ್ಯಾತ ಸಮುದಾಯಗಳಾವುವು ಕಣ್ಣಿಗೆ ಕಾಣುವುದೇ ಇಲ್ಲ, ದಶಕಗಳ ಹಿಂದೆ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಂಮರು ಇಂದು ಸಂಘಟಿತವಾಗಿ ಮುಂಚೂಣಿಯಲ್ಲಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಬಹುಸಂಖ್ಯಾತ ಮತ ಬ್ಯಾಂಕ್ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರಣಕ್ಕಾಗಿ ಮುಸ್ಲಿಂಮರಿಗೆ ಮಾತ್ರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಲಾಗಿದೆ, ಇದೀಗ ಸರ್ಕಾರಿ ಕಾಮಗಾರಿಗಳಲ್ಲೂ 4% ಮೀಸಲಾತಿ ಕಲ್ಪಿಸಲು ಮುಂದಾಗಿ ನಿಯಮ
ರೂಪಿಸಲು ಹೊರಟಿರುವುದು ಮುಸ್ಲಿಂ ಓಲೈಕೆಯ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂಮರೂ ಸೇರಿದಂತೆ ಸಮಗ್ರ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡರೆ ನಾವು ಅದನ್ನು ಆಕ್ಷೇಪಿಸುವುದಿಲ್ಲ. ಆದರೆ ಕೇವಲ ಮುಸ್ಲಿಂಮರನ್ನು ಮಾತ್ರ ಪ್ರತ್ಯೇಕಿಸಿ ಓಲೈಸುವುದು ಸಮಾಜ
ಕಟ್ಟುವುದಕ್ಕೋ ಅಥವಾ ಸಮಾಜ ಒಡೆಯುವುದಕ್ಕೋ ಎಂಬ ಪ್ರಶ್ನೆ ಜನರು ಕೇಳುತ್ತಾರೆ ಎಂದು ಹೇಳಿದ್ದಾರೆ.
“ಬಾಯಲ್ಲಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ಮಂತ್ರ, ಸಂಪನ್ಮೂಲದ ಪಾಲಿನಲ್ಲಿ ನಿರಂತರ ಪಕ್ಷಪಾತ”. ಇದು ಕಾಂಗ್ರೆಸ್ ಅನುಸರಿಸಿಕೊಂಡು ಬಂದಿರುವ ಇಬ್ಬಂದಿ ನೀತಿ, ಸರ್ಕಾರದ ಯೋಜನೆಗಳು ಕಾರ್ಯಗತಗೊಳ್ಳಲು ಪಾರದರ್ಶಕ ನಿಯಮದ ಅಡಿಯಲ್ಲಿ ಕಾಮಗಾರಿಗಳ ನಿರ್ವಹಣೆಯಾಗಬೇಕು, ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿ ನೀಡುವುದು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿದೆ, ಆದರೆ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವುದು ಪಾರದರ್ಶಕ ನಿಯಮದ ಅರ್ಥವನ್ನೇ ಕಳೆದುಕೊಳ್ಳುತ್ತದೆ ಎಂದು ಕಿಡಿಕಾರಿದ್ದಾರೆ.
ಕಸುಬು ಆಧಾರಿತ ಅತಿ ಹಿಂದುಳಿದ ಕಾಯಕ ಸಮುದಾಯಗಳು ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಬದುಕಿನ ಅಸ್ತಿತ್ವ ಕಂಡುಕೊಳ್ಳಲು ಪ್ರಯಾಸಪಡುತ್ತಿದ್ದಾರೆ, ಇಂತಹ ಅತಿ ಹಿಂದುಳಿದ ಸಮುದಾಯಗಳಿಗೆ ಯಾವ ಕಾರ್ಯಕ್ರಮ, ಯೋಜನೆಗಳನ್ನು ಹಾಗೂ ವಿಶೇಷ ಮೀಸಲಾತಿಯನ್ನು ಕಲ್ಪಿಸಿಕೊಡದ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಸಮಾಜ ಹಾಗೂ ನಾಡನ್ನು ವಿಭಜನೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ, ವಿರೋಧಿಸುತ್ತದೆ. ಸರ್ಕಾರ ಸದ್ಯ ಕಾಮಗಾರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೊರಟಿರುವ ತುಷ್ಟೀಕರಣದ ಧೋರಣೆಯ ನಿರ್ಧಾರವನ್ನು ಕೈಬಿಡಲು ಒತ್ತಾಯಿಸುವೆ ಎಂದು ಹೇಳಿದ್ದಾರೆ.