SUDDIKSHANA KANNADA NEWS/ DAVANAGERE/ DATE:04-02-2024
ದಾವಣಗೆರೆ: ಮುಂದಿನ ಬಾರಿ ನಡೆಯಲಿರುವ ರಾಜ್ಯ ಮಟ್ಟದ ೩೯ನೇ ಪತ್ರಕರ್ತರ ಸಮ್ಮೇಳನ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ನೀಡಲು ಪ್ರತಿನಿಧಿಗಳ ಸಭೆ ನಿರ್ಣಯಿಸಲಾಗಿದೆ.
ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಣಯ ಘೋಷಿಸಲಾಗಿದೆ.
ಈ ವಿಷಯ ಪ್ರಕಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ೩೮ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಈ ಹಿಂದೆ ನಡೆದ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ಅದ್ಧೂರಿಯಾಗಿ ನಡೆದಿದೆ. ಈ ಯಶಸ್ವಿಗೆ ಜಿಲ್ಲಾ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.
ಮುಂದಿನ ಬಾರಿ ನಡೆಯಲಿರುವ ೩೯ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ಗಡಿಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಮುಂದಿನ ಪತ್ರಕರ್ತರ ಸಮ್ಮೇಳನ ನಡೆಸಲು ಭಾರೀ ಬೇಡಿಕೆ ಬಂದಿದ್ದು, ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿಯಲ್ಲೂ ನಾವು ಸಮ್ಮೇಳನ ಮಾಡಿದ್ದೇವೆ. ಈಗ ಶಿವಮೊಗ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಿಂದ ಸಾಕಷ್ಟು ಪೈಪೋಟಿ ಬಂದಿದೆ. ಮೊದಲು ಸಮ್ಮೇಳನ ನಡೆಸಲು ಮುಂದೆ ಬನ್ನಿ ಎಂದರೆ ನೂರು ಕಿ.ಮೀ. ದೂರ ಓಡುತ್ತಿದ್ದರು. ಈಗ ನಮಗೆ ಕೊಡಿ ಎಂದು ಪೈಪೋಟಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ಒಪ್ಪಿಗೆ ಮೇರೆಗೆ ಮುಂದಿನ ಬಾರಿ 39ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನಡೆಸಲು ಪ್ರತಿನಿಧಿಗಳ ಸಭೆ ನಿರ್ಣಯಿಸಿದೆ ಎಂದು ಘೋಷಣೆ ಮಾಡಿದರು.
ಮೊದಲ ನಿರ್ಣಯವಾಗಿ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ಬಸ್ ಪಾಸ್ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಶಿವಾನಂದ ತಗಡೂರು ಅವರು, ಮುಂದಿನ ಸಮ್ಮೇಳನ ನಡೆಸಲು 50ಲಕ್ಷ ರೂ. ನೀಡಬೇಕು ಎಂಬ ಹಕ್ಕೋತ್ತಾಯ ಮಂಡಿಸಿದರು.
ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದೆ. ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘಕ್ಕೆ ಅಭಿನಂದನಾ ನಿರ್ಣಯ, ಕ್ರಿಕೆಟ್ ಟೂರ್ನಿಯನ್ನು ನಡೆಸಿದ ಮಂಗಳೂರು ಸಂಘಕ್ಕೆ ಅಭಿನಂದನಾ ನಿರ್ಣಯಿಸಲಾಗಿದೆ ಎಂದರು.
ಅಲ್ಲದೇ ಪತ್ರಕರ್ತರಿಗೂ ಅರೋಗ್ಯ ಕ್ಷೇಮಾಭಿವೃದ್ಧಿ ಯೋಜನೆ ಪ್ರಾರಂಭಿಸಬೇಕು. ತಾಲೂಕು ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಘಟಕ ಸ್ಥಾಪಿಸಬೇಕು. ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಪಿಯುಸಿ, ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್ಟ್ಯಾಪ್ ನೀಡಬೇಕು. ಪತ್ರಕರ್ತರು ಮೃತಪಟ್ಟರೆ 2 ಲಕ್ಷ ರೂ. ಸಹಾಯಧನ ನೀಡಬೇಕು. ಟೋಲ್ನಲ್ಲಿ ಉಚಿತ ಪ್ರವೇಶ ಒದಗಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಭವಾನಿ ಸಿಂಗ್ ಟಾಕೂರ್, ಅಜ್ಜಮಾಡ ರಮೇಶ್ ಪುಟ್ಟಪ್ಪ, ಪುಂಡಲಿಕ ಪಿ.ಬಾಲಾಜಿ, ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರೆಗೋಡು, ನಿಂಗಪ್ಪ ಚೌವಡಿ, ವಸುದೇವ ಹೊಳ್ಳ ಸೇರಿದಂತೆ ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.