SUDDIKSHANA KANNADA NEWS/ DAVANAGERE/ DATE:05-03-2025
ದಾವಣಗೆರೆ: ಜಿಲ್ಲೆಯ ರೈತರ ಜೀವನಾಡಿ ಭದ್ರಾ ಡ್ಯಾಂ ಕಾಲುವೆಗಳಲ್ಲಿ ಗಿಡ ಗಂಟೆಗಳು ಬೆಳೆದು ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಅದಕ್ಕಾಗಿ ಭದ್ರಾ ಕಾಲುವೆಗಳ ಆಧುನಿಕರಣಕ್ಕೆ ಕನಿಷ್ಠ 2 ಸಾವಿರ ಕೋಟಿ ರೂಪಾಯಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಒಕ್ಕೂಟವು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.
ಎಲ್ಲಾರಿಗೂ ಅನ್ನ ನೀಡುವ ರೈತರನ್ನು ಅನ್ನದಾತ ಎಂದು ಕರೆದರೆ ಸಾಲದು. ಅವನಿಗೆ ಬೆಳೆ ಬೆಳೆಯಲು ಸೂಕ್ತ ಸೌಲಭ್ಯ ಮತ್ತು ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ರೈತ ಬೆವರು ಸುರಿಸಿ ದುಡಿದು ತಿಂದು ಎಲ್ಲರಿಗೂ ಊಟ ಮಾಡಲು ಅನ್ನ ನೀಡುವವನು ಎಂಬುದನ್ನು ಸರ್ಕಾರ ಮರೆಯಬಾರದು. ರೈತ ಎಂದಿಗೂ ಇನ್ನೊಬ್ಬರ ಮುಂದೆ ಕೈ ಒಡಬಾರದು. ಸಾರ್ವಜನಿಕರಿಗೆ ನೀಡುತ್ತಿರುವ ಗ್ಯಾರಂಟಿಗಳ ಬದಲಾಗಿ ರೈತರ ಹಿತ ಕಾಪಾಡುವಂತಹ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿತು.
ದೇಶದಲ್ಲೇ ಪ್ರಥಮ ಬಾರಿಗೆ ರೈತನನ್ನು ನೇಗಿಲ ಯೋಗಿ ಎಂದು ಕರೆದ ಕೀರ್ತಿ ರಾಷ್ಟ್ರಕವಿ ಕುವೆಂಪು ರವರಿಗೆ ಸಲ್ಲುತ್ತದೆ. ಹತ್ತು ಹಲವು ಪ್ರಾಣಿ ಪಕ್ಷಿಗಳನ್ನು ಸಾಕಿ ಸಲಹಿದ ರೈತನನ್ನು ಸಶಕ್ತನ್ನಾಗಿ ಮಾಡಿದ್ರೆ, ಸರ್ಕಾರಕ್ಕೆ ಸಾಲ ಕೊಡುತ್ತಾನೆ. ಆದ್ದರಿಂದ ರಾಜ್ಯದಲ್ಲಿ ಬರುವ ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ 2025-26ನೇ ಸಾಲಿನ ಬಜೆಟ್ ರೈತರ ಹಿತದೃಷ್ಟಿಯಿಂದ ಇರುವ ರೈತಪರ ಬಜೆಟ್ ಆಗಿರಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ ಎಂದು ತಿಳಿಸಿತು.
ಭದ್ರಾ ಡ್ಯಾಂ 1972 ರಲ್ಲಿ ಗಾರೆ, ಸುಣ್ಣ, ಕಲ್ಲುಗಳಿಂದ ನಿರ್ಮಿಸಲಾಗಿದೆ. ಸಹಜವಾಗಿ ಬುಡದಲ್ಲಿ ನೀರು ಸೋರಿಕೆಯಾಗುತ್ತಿದೆ. ಕ್ರೆಸ್ಟ್ ಗೇಟುಗಳು ಹಳೆಯದಾಗಿವೆ. ಅವುಗಳನ್ನು ರೀಕಂಡೀಷನ್ ಮಾಡಿಸಿಲ್ಲ. ಇದರಿಂದ ಅಭದ್ರತೆ ಕಾಡುತ್ತಿದೆ. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಬೇಕು ಎಂದು ನಿಯೋಗವು ಆಗ್ರಹಿಸಿದೆ.
ರೈತರು ಬೆವರು ಸುರಿಸಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ಟೆಂಡರ್ ಪದ್ಧತಿಯನ್ನು ಕಡ್ಡಾಯಗೊಳಿಸಬೇಕು ಮತ್ತು ತೂಕದಲ್ಲಿ ವಂಚನೆ ತಪ್ಪಿಸಲು ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ವೇಬ್ರೀಡ್ಜ್ ಸ್ಥಾಪನೆ ಮಾಡಬೇಕು ಎಂದು ತಿಳಿಸಿತು.
ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಎಪಿಎಂಸಿ ವತಿಯಿಂದ ವೇಬ್ರೀಡ್ಜ್ ಸ್ಥಾಪನೆ ಮಾಡಿ, ಎಪಿಎಂಸಿ ಮೂಲಕವೇ ಸರ್ಕಾರ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿತು.
ಕೃಷಿ-ತೋಟಗಾರಿಕೆ ಇಲಾಖೆಗಳಲ್ಲಿ ಹನಿ/ತುಂತುರು ನೀರಾವರಿ ಸೇರಿದಂತೆ ಯಂತ್ರೋಪಕರಣಗಳ ಖರೀದಿಗೆ ನೀಡುವ ಸಹಾಯಧನವನ್ನು ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿತು.
ರೈತರ ನಿಯೋಗದಲ್ಲಿ ಮಾಜಿ ಶಾಸಕ ಬಸವರಾಜನಾಯ್ಕ, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಆರನೇ ಕಲ್ಲು ವಿಜಯಕುಮಾರ, ಅತಿಥ್ ಅಂಬರಕರ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್ ಮುಂತಾದವರು ಉಪಸ್ಥಿತರಿದ್ದರು.