SUDDIKSHANA KANNADA NEWS/ DAVANAGERE/ DATE-10-06-2025
ಬೆಂಗಳೂರು: ಕಳೆದ ಜೂನ್ 4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ, ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ವಿಜಯೇಂದ್ರ ಅವರು, ಕುಟುಂಬ ಬೆಳಗಬೇಕಿದ್ದ, ಉಜ್ವಲ ಭವಿಷ್ಯದ ಕನಸು ಕಂಡಿದ್ದ 11 ಯುವ ಜನರ ಸಾವು ಆ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಹೆತ್ತವರು ನಿತ್ಯ ಕಣ್ಣೀರಿಡುವಂತಾಗಿದೆ ಎಂದು ಹೇಳಿದ್ದಾರೆ.
ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ. ಸಾವಿಗೀಡಾದ ಹನ್ನೊಂದು ಜನರ ಪೈಕಿ ಮನೋಜ್ ಎಂಬ ಯುವಕನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಆತನ ಅಜ್ಜಿ ಆಹಾರ ತ್ಯಜಿಸಿ ಪ್ರಾಣ ಬಿಟ್ಟಿರುವ ಸುದ್ದಿ ನೋವು ತರಿಸಿದೆ. ದುರಂತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬ ಯಾವ ಪರಿಯಲ್ಲಿ ರೋದಿಸುತ್ತಿದೆ ಎಂಬುದನ್ನು ಮೃತ ದೇವೀರಮ್ಮನವರ ಸಾವು ಸಾಕ್ಷೀಕರಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ, ನಮ್ಮ ರಾಜ್ಯ ಅಸುರಕ್ಷತೆಯ ತಾಣ ಎಂಬ ಸಂದೇಶ ರವಾನೆಯಾಗಿದೆ. ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಸಂಬಂಧವಿಲ್ಲ, ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಹೊರಲಾಗದು ಎಂಬ ಮುಖ್ಯಮಂತ್ರಿಗಳ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬಹಿರಂಗ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.