SUDDIKSHANA KANNADA NEWS/ DAVANAGERE/ DATE:10-07-2023
ದಾವಣಗೆರೆ: ಕೇಂದ್ರ ಸರಕಾರವು ಸರಕಾರಿ ಸ್ವಾಮ್ಯದ ಬ್ಯಾಂಕು (Bank)ಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿದೆ. ಸರಕಾರದ ಈ ಖಾಸಗೀಕರಣ ಧೋರಣೆಯನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ತೀವ್ರವಾಗಿ ವಿರೋಧಿಸುತ್ತದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಹೆಚ್. ವೆಂಕಟಾಚಲಂ ಹೇಳಿದರು.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕೆನರಾ ಬ್ಯಾಂಕ್ (Bank) ಎಂಪ್ಲಾಯೀಸ್ ಯೂನಿಯನ್‌ನ 10 ನೇ ರಾಜ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಬ್ಯಾಂಕು (Bank) ಖಾಸಗೀಕರಣಗೊಳಿಸಿದರೆ ದೇಶದ ಠೇವಣಿದಾರರ ಹಿತಕ್ಕೆ ಧಕ್ಕೆ ಉಂಟಾಗಲಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿ ಮಾತ್ರ ಸಾರ್ವಜನಿಕರ ಠೇವಣಿ ಹಣ ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಹೇಳಿದರು.
ಚರಿತ್ರೆಯನ್ನು ಅವಲೋಕಿಸಿದರೆ ನಮ್ಮ ದೇಶದಲ್ಲಿ ನೂರಾರು ಖಾಸಗಿ ಬ್ಯಾಂಕುಗಳು ಮುಳುಗಡೆಯಾಗಿವೆ. ಆದರೆ 1969 ರಲ್ಲಿ ನಡೆದ ಬ್ಯಾಂಕ್ ರಾಷ್ಟ್ರೀಕರಣದ ಬಳಿಕ ಯಾವುದೇ ಸರಕಾರಿ ಬ್ಯಾಂಕುಗಳು ಕಳೆದ 55 ವರ್ಷಗಳಲ್ಲಿ ಸಾರ್ವಜನಿಕರ ಠೇವಣಿ ಹಣಕ್ಕೆ ಅಭದ್ರತೆಯನ್ನು ಉಂಟು ಮಾಡಿಲ್ಲ. ಆದ್ದರಿಂದ ಸರಕಾರದ ಖಾಸಗೀಕರಣದ ನೀತಿಯು ದೇಶ ವಿರೋಧಿಯಲ್ಲದೇ ಬೇರೇನೂ ಅಲ್ಲ ಎಂದು ಪ್ರತಿಪಾದಿಸಿದರು.
Read Also This Story
S. S. Mallikarjun: ಮಾವ- ಅಳಿಯ ವಿಚಾರ ನನಗೆ ಗೊತ್ತಿಲ್ಲ, ಜಿ. ಎಂ. ಸಿದ್ದೇಶ್ವರ ಸೋಲಿಸುವುದೇ ನಮ್ಮ ಗುರಿ: ಎಸ್. ಎಸ್. ಮಲ್ಲಿಕಾರ್ಜುನ್
ಸರಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಸಾವಿರಾರು ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುತ್ತಿದೆ. ಇದು ರಾಷ್ಟ್ರೀಕರಣ ನೀತಿಯನ್ನು ಬುಡಮೇಲಾಗಿಸುವ ತಂತ್ರಗಾರಿಕೆಯಾಗಿದೆ. ಕಳೆದ ಮಾರ್ಚ್ ಅಂತ್ಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ನಿವ್ವಳ ಲಾಭವನ್ನು ಗಳಿಸಿದರೂ ಸರಕಾರ ಖಾಸಗೀಕರಣದ ಮಂತ್ರವನ್ನು ಜಪಿಸುತ್ತಿರುವುದು ಆಘಾತಕಾರಿಯಾಗಿದೆ. ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು. ಖಾಲಿ ಇರುವ ಎರಡು ಲಕ್ಷಕ್ಕೂ ಹೆಚ್ಚಿನ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿ ಸಾರ್ವಜನಿಕರಿಗೆ ಉತ್ಕೃಷ್ಟವಾದ ಸೇವೆ ಸಿಗುವಂತೆ ಮಾಡಬೇಕು. ಸಾರ್ವಜನಿಕ ವಲಯದ ಬ್ಯಾಂಕುಗಳು ಗಳಿಸುವ ಲಾಭದ ಹಣವು ಈ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು ಖಾಸಗಿ ಬಂಡವಾಳಷಾಹಿಗಳ ಸಾಲವನ್ನು ಮನ್ನಾ ಮಾಡಲು ಬಳಕೆಯಾಗಬಾರದು ಎಂದು ಸಿ.ಹೆಚ್.ವೆಂಕಟಾಚಲಂ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಶ್ರೀಕೃಷ್ಣ, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಕೆನರಾ ಬ್ಯಾಂಕಿನ ಬೆಂಗಳೂರು ವೃತ್ತ ಕಛೇರಿಯ ಉಪ ಮಹಾ ಪ್ರಬಂಧಕ ಗಣೇಶ್, ಕೆಪಿಬಿಇಎಫ್ ನ ಉಪ ಪ್ರಧಾನ ಕಾರ್ಯದರ್ಶಿ ಕೆ.ಜಿ.ಫಣೀಂದ್ರ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಅನಿರುಧ್ ಕುಮಾರ್, ಅಧಿಕಾರಿಗಳ ಸಂಘಟನೆಯ ಪ್ರಶಾಂತ್ ಕುಮಾರ್, ಸಿಬಿಇಯು ರಾಜ್ಯ ಸಮಿತಿಯ ಚೇರ್‌ಮನ್ ಆರ್.ಪಿ.ಪ್ರದೀಪ್ ಕುಮಾರ್, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ದೇವದಾಸ್, ಸಿಬಿಇಯು ರಾಜ್ಯ ಸಮಿತಿಯ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸನ್, ಸಿಬಿಇಯು ಮಾಜಿ ಅಧ್ಯಕ್ಷರುಗಳಾದ ಹೆಚ್.ವಸಂತ್ ರೈ, ಕೆ.ಶಶಿಕಾಂತ್ ಹಾಗೂ ಎ.ಆರ್.ತಂತ್ರಿ, ರಾಘವೇಂದ್ರ ಕೋನಾಪುರ್, ಎಂ.ರಾಮಚಂದ್ರ, ವಿನೋದ್
ಮೇತ್ರಿ, ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನವು ಬೆಂಗಳೂರಿನ ಜಯನಗರದಲ್ಲಿರುವ ಚಾಮರಾಜು ಕಲ್ಯಾಣ ಮಂದಿರದಲ್ಲಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 1400 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಮತ್ತು ವೀಕ್ಷಕರು ಆಗಮಿಸಿದ್ದರು. ಸಮ್ಮೇಳನದ ಕೊನೆಯಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಆರ್.ಪಿ.ಪ್ರದೀಪ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಎಂ.ಎಸ್.ಶ್ರೀನಿವಾಸನ್ ಮತ್ತು ಇನ್ನಿತರ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಂದ ಕೆ.ರಾಘವೇಂದ್ರ ನಾಯರಿ ಸಹ ಕಾರ್ಯದರ್ಶಿಯಾಗಿ ಮತ್ತು ರಾಜ್ಯ ಸಮಿತಿ ಸದಸ್ಯರಾಗಿ ಕೆ.ವಿಶ್ವನಾಥ್ ಬಿಲ್ಲವ, ಸಿ.ಪರಶುರಾಮ, ಆರ್. ಆಂಜನೇಯ, ಜಿ.ಶ್ರೀನಿವಾಸ್ ಆಯ್ಕೆಗೊಂಡರು. ಸಂಘದ ರಾಷ್ಟ್ರೀಯ ಸಮ್ಮೇಳನವು ಆಗಸ್ಟ್ 12, 13, 14 ರಂದು ಆಂದ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿದೆ.