SUDDIKSHANA KANNADA NEWS/ DAVANAGERE/ DATE:28-02-2025
ಬೆಂಗಳೂರು: ನಗರದ ಬಿಜೆಪಿ ಶಾಸಕರು ಹಾಗೂ ಸಂಸದರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಬಾರಿಯ ಬಜೆಟ್ ನಲ್ಲಿ ಬಿಜೆಪಿ ಶಾಸಕರುಗಳ ಕ್ಷೇತ್ರಕ್ಕೆ , ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಮನವಿ ಮಾಡಿದರು.
ರಾಜ್ಯದ ಒಟ್ಟಾರೆ ಆಯವ್ಯಯಕ್ಕೆ ಬೆಂಗಳೂರು ನಗರದಿಂದಲೇ ಹೆಚ್ಚಿನ ಆದಾಯ ಬರುತ್ತಿರುವುದರಿಂದ ಬೆಂಗಳೂರು ಬಿಜೆಪಿ ಶಾಸಕರುಗಳ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಎಂದು ಕೋರಿಕೆ ಸಲ್ಲಿಸಿದರು.
ರಸ್ತೆ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಕೋರಿದರು. ಒಟ್ಟಾರೆ ಶಾಸಕರ ಕ್ಷೇತ್ರಾಭಿವೃದ್ಧಿ ಹಾಗೂ ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ 100ಕೋಟಿ ಅನುದಾನಕ್ಕೆ ಒತ್ತಾಯಿಸಿದರು.
ಮೆಟ್ರೋ ದರ ಮತ್ತಷ್ಟು ಇಳಿಸುವ ಕೋರಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಈಗಾಗಲೇ ಅವೈಜ್ಞಾನಿಕ ದರ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ, ಮೆಟ್ರೋಗೆ ಪತ್ರ ಬರೆಯಲಾಗಿದೆ. ಸಾರ್ವಜನಿಕರಿಗೆ ಹೊರೆಯಾಗದಂತೆ ಮೆಟ್ರೋ ದರ ಇಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು .
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ನಿಯೋಗದಲ್ಲಿ ಬಿಜೆಪಿ ಪಕ್ಷದ ಶಾಸಕರು ಸಂಸದರು ಇದ್ದರು.