SUDDIKSHANA KANNADA NEWS/ DAVANAGERE/ DATE:02-03-2025
ದಾವಣಗೆರೆ: ರಾಜ್ಯದಲ್ಲಿ ಕಳೆದ ವಾರದಲ್ಲಿ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಸಾವಿಗೀಡಾಗುತ್ತಿವೆ. ತಕ್ಷಣ ಎಚ್ಚೆತ್ತುಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ನಾಟಿ ಕೋಳಿಗೆ ರೂ. 90 ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಇದು ಅತ್ಯಲ್ಪವಾಗಿದ್ದು, ನಾಟಿ ಕೋಳಿ ಸಾರು ಮುದ್ದೆ ಊಟದ ಪ್ರಿಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಿಷ್ಠ ಒಂದು ಕೆ.ಜಿ ತೂಕದ ನಾಟಿ ಕೋಳಿಗೆ ₹600 ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಕಳೆದ ಒಂದು ವಾರದಿಂದ ರಾಜ್ಯದ ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಮುಂತಾದ ಕೆಲವು ಜಿಲ್ಲೆಗಳಲ್ಲಿ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಸಾವಿಗೀಡಾಗುತ್ತಿವೆ. ತಕ್ಷಣ ಎಚ್ಚೆತ್ತುಕೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರ ನಿದ್ರೆ ಮಾಡುತ್ತಿದೆ. ಹಕ್ಕಿಜ್ವರ ಕಾಣಿಸಿದ ಹಳ್ಳಿಗಳಲ್ಲಿ ಊರಿನ ಎಲ್ಲಾ ಕೋಳಿಗಳನ್ನು ಹಿಡಿದು ಕೊಂದು, ಗುಂಡಿ ತೋಡಿ ಹೂಳಲಾಗುತ್ತಿದೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ರೈತರು, ಬಡವರು, ಕೃಷಿ ಕೂಲಿಗಾರರು ತಮ್ಮ ಕೌಟುಂಬಿಕ ದೈನಂದಿನ ಖರ್ಚಿಗಾಗಿ ನಾಟಿ ಕೋಳಿ ಸಾಕುತ್ತಿದ್ದಾರೆ. ಹಕ್ಕಿಜ್ವರದ ಬಾಧೆಯಿಂದ ನಾಟಿ ಕೋಳಿ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಒಂದು ಕೆ.ಜಿ ತೂಕದ ನಾಟಿ ಕೋಳಿಗೆ ₹600 ಪರಿಹಾರ ನೀಡಿದರೆ, ಬಡ ಕೋಳಿ ಸಾಕಾಣಿಕೆದಾರರ ಸಂಕಷ್ಟಕ್ಕೆ ಸ್ಪಂದಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ತಕ್ಷಣ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಹಕ್ಕಿಜ್ವರದಿಂದ ಬಳಲುತ್ತಿರುವ ಕೋಳಿಗಳ ಮಾದರಿಗಳನ್ನು ಭೋಪಾಲ್ ನಲ್ಲಿರುವ “ರಾಷ್ಟ್ರೀಯ ಉನ್ನತ ಭಧ್ರತಾ ಪ್ರಾಣಿ ರೋಗಗಳ ಸಂಸ್ಥೆ”ಗೆ ರವಾನಿಸಿ ಪರೀಕ್ಷೆ ಮಾಡಿಸಬೇಕು. ರೋಗ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಊಟ ಮಾಡಲು ಒಂದು ನಾಟಿ ಕೋಳಿ ಸಿಗದಂತಹ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಬಹುದು ಎಂದು ರೈತ ಪರ ಹೋರಾಟಗಾರ, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಳ್ಳಿಗಳಲ್ಲಿ ಸಾಕಿರುವ ನಾಟಿ ಕೋಳಿಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಪ್ರಸ್ತುತ 1 ಕೆ.ಜಿಗೆ ₹600 ದರವಿದೆ. ಮೂರ್ನಾಲ್ಕು ಕೆ.ಜಿ ತೂಕದ ಕೋಳಿ 2 ಸಾವಿರದಿಂದ 3 ಸಾವಿರಕ್ಕೆ ಮಾರಾಟವಾಗುತ್ತವೆ. ಕೆಲವು ಜೂಜಿನ ಹುಂಜಗಳಿಗೆ 1 ಲಕ್ಷದ ಬೆಲೆಯಿದೆ. ವಸ್ತುಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಒಂದು ಕೋಳಿಗೆ ₹90 ದರ ಪರಿಹಾರ ನಿಗದಿ ಮಾಡಿರುವುದು ಅತ್ಯಲ್ಪ, ಅವೈಜ್ಞಾನಿಕ ಮತ್ತು ಕೋಳಿ ಸಾಕಾಣಿಕೆದಾರ ಬಡವರ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.